

ನವದೆಹಲಿ, 05 ಜೂನ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದ ಗ್ರಾಹಕ ವ್ಯವಹಾರ ಸಚಿವಾಲಯ ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ರಾಷ್ಟ್ರೀಯ ಇ-ಆಡಳಿತದಲ್ಲಿ ರಜತ ಪ್ರಶಸ್ತಿಗೆ ಭಾಜನವಾಗಿದೆ.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಇಲಾಖೆ, ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಸಚಿವಾಲಯಗಳ ಕಾರ್ಯಕ್ಷಮತೆ ಮೌಲ್ಯಾಂಕನದಲ್ಲಿ ಪ್ರಲ್ಹಾದ ಜೋಶಿ ಅವರ ಗ್ರಾಹಕ ವ್ಯವಹಾರ ಸಚಿವಾಲಯ ಮೊದಲ ಸ್ಥಾನದಲ್ಲಿತ್ತು. ಇದೀಗ ಕೇಂದ್ರ ಸರ್ಕಾರ , 2026ರ ಇ ಆಡಳಿತಕ್ಕಾಗಿ ನೀಡುತ್ತಿರುವ ರಾಷ್ಟ್ರೀಯ ಬೆಳ್ಳಿ ಪುರಸ್ಕಾರವನ್ನು ಮುಡಿಗೇರಿಸಿಕೊಂಡಿದೆ.
ಸಚಿವ ಪ್ರಲ್ಹಾದ ಜೋಶಿ ಅವರ ಮಾರ್ಗದರ್ಶನ, ಸಲಹೆ-ಸೂಚನೆಯಂತೆ ಗ್ರಾಹಕರ ಹಿತರಕ್ಷಣೆಗೆ ಬದ್ಧವಾಗಿ, ಪಾರದರ್ಶಕತೆಗೆ ಒತ್ತು ನೀಡುತ್ತಿದೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ. ಇದಕ್ಕೆ ನಿದರ್ಶನವಾಗಿ 'ಇ-ಜಾಗೃತಿ' ಪೋರ್ಟಲ್ 'ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗಳಲ್ಲಿ ಪ್ರತಿಷ್ಠಿತ ಬೆಳ್ಳಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
*₹ 5 ಲಕ್ಷ ಮತ್ತು ಟ್ರೋಫಿ:*
ದೇಶಾದ್ಯಂತ ಇ-ಆಡಳಿತದಲ್ಲಿ ಅತ್ಯುತ್ತಮ ಸೇವೆ ಒದಗಿಸುತ್ತಿರುವುದನ್ನು ಗುರುತಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ಘೋಷಿಸಿದ್ದು, ಟ್ರೋಫಿ, ಪ್ರಮಾಣಪತ್ರ ಮತ್ತು ₹ 5 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ. ಈ ರಾಷ್ಟ್ರೀಯ ಪ್ರಶಸ್ತಿಗೆ ಕೇಂದ್ರ ಗ್ರಾಹಕ ಇಲಾಖೆಯ 'ಇ ಜಾಗೃತಿ ' ಪೋರ್ಟಲ್
ಸೇರಿದಂತೆ ಏಳು ವಿಭಾಗಗಳಿಂದ ಒಟ್ಟು 17 ಯೋಜನೆಗಳು ಆಯ್ಕೆಯಾಗಿದ್ದು, ಈ ಪೈಕಿ ಇ ಜಾಗೃತಿ ಡಿಜಿಟಲ್ ವೇದಿಕೆಯೂ ಒಂದು. ಪ್ರಶಸ್ತಿ ಮುಡಿಗೇರಿಸಿಕೊಂಡ 17 ಯೋಜನೆಗಳಲ್ಲಿ 10 ಚಿನ್ನದ ಪ್ರಶಸ್ತಿ (₹ 10 ಲಕ್ಷ ನಗದು) ಮತ್ತು 6 ಬೆಳ್ಳಿ ಪ್ರಶಸ್ತಿ (₹ 5 ಲಕ್ಷ ನಗದು) ಹಾಗೂ 1 ಜ್ಯೂರಿ ಪ್ರಶಸ್ತಿಯನ್ನು ಪಡೆದಿವೆ.
ಇ ಆಡಳಿತ ಅನುಷ್ಠಾನದಲ್ಲಿನ ಶ್ರೇಷ್ಠತೆ ಗುರುತಿಸಲು ಮತ್ತು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅಂತೆಯೇ ಈ ವರ್ಷ ಏಳು ವಿಭಾಗಗಳಲ್ಲಿ 29ನೇ NAeG 2026 ಪ್ರಶಸ್ತಿ ಪುರಸ್ಕೃತರು ಗ್ರಾಮ ಪಂಚಾಯತ್ಗಳ ವರ್ಗವನ್ನು ಒಳಗೊಂಡಿದ್ದು, ಡಿಜಿಟಲೀಕರಣದ ಪಾರದರ್ಶಕ, ತ್ವರಿತ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ರಾಜಸ್ಥಾನದ ಜೈಪುರದಲ್ಲಿ ನಡೆಯುವ 29ನೇ ಇ-ಆಡಳಿತ ರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.