
ನವದೆಹಲಿ, 05 ಜೂನ್ (ಹಿ.ಸ.) :
ಆ್ಯಂಕರ್ : ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಮೂರು ದಿನಗಳ ಅಧಿಕೃತ ಭೇಟಿಗಾಗಿ ಫ್ರಾನ್ಸ್ಗೆ ತೆರಳಿದ್ದು, ಈ ಸಂದರ್ಭದಲ್ಲಿ ಎರಡೂ ದೇಶಗಳ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಹಲವು ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಭೇಟಿ ವೇಳೆ ಅವರು ಫ್ರಾನ್ಸ್ನ ಓರ್ಲಿಯನ್ಸ್ ವಾಯುನೆಲೆಯಿಂದ ಎ–400ಎಂ ಸಾರಿಗೆ ವಿಮಾನದಲ್ಲಿ ಹಾರಾಟ ನಡೆಸಿ ಅದರ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವನ್ನು ಪರಿಶೀಲಿಸಿದರು.
ಫ್ರಾನ್ಸ್ನ ವಾಯು ಮತ್ತು ಬಾಹ್ಯಾಕಾಶ ಪಡೆಗಳ ಪ್ರಧಾನ ಕಚೇರಿಯಲ್ಲಿ ಚೀಫ್ ಆಫ್ ಸ್ಟಾಫ್ ಜನರಲ್ ಜೆರೋಮ್ ಬೆಲಾಂಜರ್ ಅವರೊಂದಿಗೆ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರಿಗೆ ಗೌರವ ವಂದನೆಯೊಂದಿಗೆ ಮಿಲಿಟರಿ ಸನ್ಮಾನ ನೀಡಲಾಯಿತು. ಬಳಿಕ ಅವರು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರ ಮಿಲಿಟರಿ ಸಿಬ್ಬಂದಿಯ ಮುಖ್ಯಸ್ಥ ಜನರಲ್ ವಿನ್ಸೆಂಟ್ ಗಿರಾಡ್ ಅವರನ್ನು ಭೇಟಿ ಮಾಡಿ ಉಭಯ ದೇಶಗಳ ರಕ್ಷಣಾ ಸಹಕಾರ ಕುರಿತು ಚರ್ಚಿಸಿದರು.
ಭೇಟಿಯ ವೇಳೆ ಅವರು ಎಕೋಲ್ ಡಿ ಗುಯೆರೆ ಹಾಗೂ ಎಕೋಲ್ ಮಿಲಿಟೈರ್ನಲ್ಲಿ ತರಬೇತಿ ಪಡೆಯುತ್ತಿರುವ ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಅಲ್ಲದೆ, ವಿನಿಮಯ ಕಾರ್ಯಕ್ರಮದಡಿ ಫ್ರಾನ್ಸ್ನಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ಅಧಿಕಾರಿ ಕೆಡೆಟ್ಗಳೊಂದಿಗೆ ಸಹ ಸಂವಾದ ನಡೆಸಿದರು. ನಂತರ ಮಾಂಟ್–ಡಿ–ಮಾರ್ಸನ್ ಏರ್ ಕಾಂಬ್ಯಾಟ್ ಕೇಂದ್ರಕ್ಕೂ ಭೇಟಿ ನೀಡಿದರು.
ಏರ್ ಚೀಫ್ ಮಾರ್ಷಲ್ ಅವರು ಫ್ರಾನ್ಸ್ನ ಪ್ರಮುಖ ರಕ್ಷಣಾ ಮತ್ತು ವೈಮಾನಿಕ ಕಂಪನಿಗಳಾದ ಡಸಾಲ್ಟ್ ಏವಿಯೇಷನ್, ಥೇಲ್ಸ್, ಸಫ್ರಾನ್ ಹಾಗೂ ಎಂಬಿಡಿಎ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು.
ಈ ವೇಳೆ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಭಾರತದಲ್ಲಿ ರಕ್ಷಣಾ ಉತ್ಪಾದನೆ ಮತ್ತು ತಂತ್ರಜ್ಞಾನ ವರ್ಗಾವಣೆಯ ಅವಕಾಶಗಳ ಕುರಿತು ಚರ್ಚೆ ನಡೆಸಲಾಯಿತು.
ಇದೇ ವೇಳೆ 114 ರಫೇಲ್ ಯುದ್ಧವಿಮಾನಗಳ ಖರೀದಿಗೆ ಸಂಬಂಧಿಸಿದ ಮಹತ್ವದ ಪ್ರಗತಿಯೂ ಗಮನ ಸೆಳೆದಿದೆ.
ಭಾರತವು ಜೂನ್ 1ರಂದು ಫ್ರಾನ್ಸ್ಗೆ ಅಧಿಕೃತ ವಿನಂತಿಪತ್ರ ಸಲ್ಲಿಸಿದ್ದು, ಈ ಒಪ್ಪಂದದಡಿ 94 ರಫೇಲ್ ಯುದ್ಧವಿಮಾನಗಳನ್ನು ಭಾರತದಲ್ಲೇ ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ. ಡಸಾಲ್ಟ್ ಏವಿಯೇಷನ್ ಸಂಸ್ಥೆ ಭಾರತೀಯ ಪಾಲುದಾರ ಸಂಸ್ಥೆಯೊಂದರೊಂದಿಗೆ ಕೈಜೋಡಿಸಿ ಈ ಉತ್ಪಾದನೆಯನ್ನು ಕೈಗೊಳ್ಳಲಿದೆ.
ಪ್ರಸ್ತುತ ಭಾರತೀಯ ವಾಯುಪಡೆಯು 36 ರಫೇಲ್ ಯುದ್ಧವಿಮಾನಗಳನ್ನು ಹೊಂದಿದೆ. ಭಾರತೀಯ ನೌಕಾಪಡೆಯು ಈಗಾಗಲೇ 26 ರಫೇಲ್ ಮೆರೈನ್ ಯುದ್ಧವಿಮಾನಗಳಿಗೆ ಆದೇಶ ನೀಡಿದೆ. ಹೊಸದಾಗಿ 114 ವಿಮಾನಗಳ ಖರೀದಿ ಪೂರ್ಣಗೊಂಡರೆ ದೇಶದ ಒಟ್ಟು ರಫೇಲ್ ಯುದ್ಧವಿಮಾನಗಳ ಸಂಖ್ಯೆ 176ಕ್ಕೆ ಏರಲಿದೆ. ಭವಿಷ್ಯದಲ್ಲಿ ನೌಕಾಪಡೆಯ ಹೆಚ್ಚುವರಿ ಬೇಡಿಕೆ ಈಡೇರಿದರೆ ಈ ಸಂಖ್ಯೆ 200ಕ್ಕೂ ಅಧಿಕವಾಗುವ ಸಾಧ್ಯತೆಯಿದೆ.
ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರ ಈ ಭೇಟಿ ಭಾರತೀಯ ವಾಯುಪಡೆ ಮತ್ತು ಫ್ರೆಂಚ್ ವಾಯು ಹಾಗೂ ಬಾಹ್ಯಾಕಾಶ ಪಡೆಗಳ ನಡುವಿನ ದೀರ್ಘಕಾಲೀನ ಮತ್ತು ಗಾಢವಾದ ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.