ಭಾರತದಲ್ಲಿ ₹3 ಲಕ್ಷ ಕೋಟಿ ಹೂಡಿಕೆ ಏರ್ಟ್ರಂಕ್ ಘೋಷಣೆ
ನವದೆಹಲಿ, 05 ಜೂನ್ (ಹಿ.ಸ.) : ಆ್ಯಂಕರ್ : ಆಸ್ಟ್ರೇಲಿಯಾ ಮೂಲದ ಹೈಪರ್ಸ್ಕೇಲ್ ಡೇಟಾ ಸೆಂಟರ್ ಕಂಪನಿ ಏರ್ಟ್ರಂಕ್ ಭಾರತದಲ್ಲಿ ಸುಮಾರು ₹3 ಲಕ್ಷ ಕೋಟಿ ಹೂಡಿಕೆ ಮಾಡಿ 5 ಗಿಗಾವ್ಯಾಟ್ ಡೇಟಾ ಸೆಂಟರ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದೆ. ದೇಶದ ಡಿಜಿಟಲ್ ಮೂಲಸೌ
Meeting


ನವದೆಹಲಿ, 05 ಜೂನ್ (ಹಿ.ಸ.) :

ಆ್ಯಂಕರ್ : ಆಸ್ಟ್ರೇಲಿಯಾ ಮೂಲದ ಹೈಪರ್ಸ್ಕೇಲ್ ಡೇಟಾ ಸೆಂಟರ್ ಕಂಪನಿ ಏರ್ಟ್ರಂಕ್ ಭಾರತದಲ್ಲಿ ಸುಮಾರು ₹3 ಲಕ್ಷ ಕೋಟಿ ಹೂಡಿಕೆ ಮಾಡಿ 5 ಗಿಗಾವ್ಯಾಟ್ ಡೇಟಾ ಸೆಂಟರ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದೆ.

ದೇಶದ ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ಇದುವರೆಗೆ ಪ್ರಸ್ತಾಪವಾಗಿರುವ ಅತಿದೊಡ್ಡ ಹೂಡಿಕೆಗಳಲ್ಲಿ ಇದೂ ಒಂದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಏರ್ಟ್ರಂಕ್ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ನಡೆಸಿದ ಭೇಟಿಯ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಭಾರತದ ಡಿಜಿಟಲ್ ಮೂಲಸೌಕರ್ಯ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, ಈ ಹೂಡಿಕೆಯು ದೇಶದ ಡಿಜಿಟಲ್ ಪರಿವರ್ತನೆಗೆ ಹೊಸ ಉತ್ತೇಜನ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಏರ್ಟ್ರಂಕ್ ಭಾರತದಲ್ಲಿ 5 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಜಾಲವನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು, ಇದರ ಮೂಲಕ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಗಳಲ್ಲಿ ಭಾರತದ ಜಾಗತಿಕ ಸ್ಥಾನಮಾನ ಮತ್ತಷ್ಟು ಬಲವಾಗಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಈ ಯೋಜನೆಯಿಂದ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಪೂರೈಕೆ ಸರಪಳಿಗಳಿಗೆ ಉತ್ತೇಜನ ದೊರೆಯಲಿದೆ. ಜೊತೆಗೆ ತಂತ್ರಜ್ಞಾನ ಆಧಾರಿತ ನಾವೀನ್ಯತೆ ಮತ್ತು ಹೂಡಿಕೆ ಆಧಾರಿತ ಆರ್ಥಿಕ ಬೆಳವಣಿಗೆಗೆ ಹೊಸ ವೇಗ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಭಾರತವು ವಿಶ್ವದ ಪ್ರಮುಖ ಡಿಜಿಟಲ್ ಆರ್ಥಿಕತೆಯ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಜಾಗತಿಕ ಡಿಜಿಟಲ್ ಆರ್ಥಿಕತೆಯ ಭವಿಷ್ಯ ರೂಪುಗೊಳ್ಳುವ ಪ್ರಮುಖ ತಾಣವಾಗಿ ಬೆಳೆಯುತ್ತಿದೆ ಎಂಬುದನ್ನು ಈ ಹೂಡಿಕೆ ಮತ್ತೊಮ್ಮೆ ದೃಢಪಡಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಡೇಟಾ ಸಂಗ್ರಹಣೆ, ಕ್ಲೌಡ್ ಸೇವೆಗಳು ಹಾಗೂ ಎಐ ಆಧಾರಿತ ತಂತ್ರಜ್ಞಾನಗಳ ಬೇಡಿಕೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಏರ್ಟ್ರಂಕ್ನ ಈ ಬೃಹತ್ ಹೂಡಿಕೆ ಘೋಷಣೆ ಭಾರತದ ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಕ್ಕೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande