
ನವದೆಹಲಿ, 04 ಜೂನ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 5ರಂದು ಗುಜರಾತ್ ಮತ್ತು ದಮನ್ ಪ್ರವಾಸ ಕೈಗೊಳ್ಳಲಿದ್ದು, ₹21,700 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ, ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ವೇಳೆ ಲಕ್ಷದ್ವೀಪದ ಅಭಿವೃದ್ಧಿಗೆ ಸಂಬಂಧಿಸಿದ ₹885 ಕೋಟಿ ವೆಚ್ಚದ ಬಂದರು ಯೋಜನೆಗಳಿಗೂ ಅಡಿಗಲ್ಲು ಹಾಕಲಿದ್ದಾರೆ.
ಪ್ರಧಾನಿ ಕಾರ್ಯಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಮಧ್ಯಾಹ್ನ ಸುಮಾರು 2.30ಕ್ಕೆ ಗುಜರಾತ್ನ ಸೂರತ್ ಜಿಲ್ಲೆಯ ಹಜಿರಾಗೆ ಆಗಮಿಸಲಿರುವ ಪ್ರಧಾನಿ, ಅಲ್ಲಿನ ಕೈಗಾರಿಕಾ ಚಟುವಟಿಕೆಗಳು ಹಾಗೂ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಬಳಿಕ ರಸ್ತೆ, ಇಂಧನ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಸಂಬಂಧಿಸಿದ ₹18,800 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿ, ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸೂರತ್ನಲ್ಲಿ ವಡೋದರಾ–ಮುಂಬೈ ಎಂಟು ಪಥಗಳ ನಿಯಂತ್ರಿತ ಪ್ರವೇಶದ ವೇಗದ ಹೆದ್ದಾರಿಯ ಆರನೇ ಮತ್ತು ಏಳನೇ ಹಂತಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ–56ರ ಪ್ರಮುಖ ಭಾಗವನ್ನು ನಾಲ್ಕು ಪಥಗಳ ರಸ್ತೆಯಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ. ಇದರಿಂದ ಆದಿವಾಸಿ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದ್ದು, ಏಕತಾ ಪ್ರತಿಮೆಗೆ ಸುಗಮ ಸಂಚಾರಕ್ಕೆ ನೆರವಾಗಲಿದೆ.
ಇದೇ ಸಂದರ್ಭದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ನೌಕರರ ರಾಜ್ಯ ವಿಮಾ ನಿಗಮದ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಈ ಆಸ್ಪತ್ರೆಯಲ್ಲಿ ವಿವಿಧ ತಜ್ಞ ವೈದ್ಯಕೀಯ ಸೇವೆಗಳು, ಕೇಂದ್ರೀಯ ಪ್ರಯೋಗಾಲಯ ಹಾಗೂ 24 ಗಂಟೆಗಳ ತುರ್ತು ಮತ್ತು ಅಪಘಾತ ಚಿಕಿತ್ಸಾ ಸೌಲಭ್ಯ ಲಭ್ಯವಾಗಲಿದೆ.
ಗುಜರಾತ್ ರಾಜ್ಯದ ವಿದ್ಯುತ್ ಪ್ರಸರಣ ಜಾಲ ವಿಸ್ತರಣೆ ಯೋಜನೆ, ವಲ್ಸಾಡ್ ಜಿಲ್ಲೆಯ ವಿದ್ಯುತ್ ವಿತರಣಾ ವ್ಯವಸ್ಥೆ ಉನ್ನತೀಕರಣ ಯೋಜನೆ, ದಹೇಜ್ ಪೆಟ್ರೋಲಿಯಂ–ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಹೂಡಿಕೆ ಪ್ರದೇಶದಲ್ಲಿನ ತ್ಯಾಜ್ಯ ಸಂಸ್ಕರಣೆ ಮೂಲಸೌಕರ್ಯ ಹಾಗೂ ಜಂಬೂಸರ್ ಬೃಹತ್ ಔಷಧ ಉತ್ಪಾದನಾ ಉದ್ಯಾನಕ್ಕೆ ಸಂಬಂಧಿಸಿದ ಉಪಯುಕ್ತತಾ ಯೋಜನೆಗಳನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ.
ನಂತರ ಸಂಜೆ ಸುಮಾರು 6.15ಕ್ಕೆ ದಮನ್ಗೆ ತೆರಳಲಿರುವ ಪ್ರಧಾನಿ, ಅಲ್ಲಿನ ನೂತನ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿ, ನಮೋ ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬಳಿಕ ₹2,970 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ದಮನ್ನಲ್ಲಿ ಸುಮಾರು ₹1,340 ಕೋಟಿ ಮೌಲ್ಯದ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿದೆ. ಇವುಗಳಲ್ಲಿ ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಹಾಗೂ ನಮೋ ಆಸ್ಪತ್ರೆ ಪ್ರಮುಖವಾಗಿವೆ. ಹೊಸ ಟರ್ಮಿನಲ್ ಪ್ರಾದೇಶಿಕ ವಾಯು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದ್ದು, ಆಸ್ಪತ್ರೆ ಪ್ರತಿದಿನ ಸುಮಾರು 1,500 ಹೊರರೋಗಿಗಳಿಗೆ ಸೇವೆ ನೀಡುವ ಸಾಮರ್ಥ್ಯ ಹೊಂದಿದೆ.
ಇದೇ ವೇಳೆ ಸುಮಾರು ₹1,630 ಕೋಟಿ ಮೌಲ್ಯದ ಹೊಸ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಐಕಾನಿಕ್ ಸೇತುವೆ, ದಮನ್ ಸಮಾವೇಶ ಕೇಂದ್ರ ಹಾಗೂ ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯ ಆವರಣ ಪ್ರಮುಖ ಯೋಜನೆಗಳಾಗಿವೆ. ಇವುಗಳಿಂದ ಪ್ರವಾಸೋದ್ಯಮ, ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಲಕ್ಷದ್ವೀಪದ ಅಭಿವೃದ್ಧಿಗೆ ಸಂಬಂಧಿಸಿದ ₹885 ಕೋಟಿ ವೆಚ್ಚದ ನಾಲ್ಕು ಪ್ರಮುಖ ಬಂದರು ಯೋಜನೆಗಳಿಗೂ ಪ್ರಧಾನಿ ಅಡಿಗಲ್ಲು ಹಾಕಲಿದ್ದಾರೆ. ಕಲ್ಪೇನಿ ಮತ್ತು ಕದಮತ್ ದ್ವೀಪಗಳ ಪೂರ್ವ ಹಾಗೂ ಪಶ್ಚಿಮ ಕರಾವಳಿಗಳಲ್ಲಿ ಆಧುನಿಕ ಬಂದರು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
ಈ ಬಹುಉದ್ದೇಶೀಯ ಜೆಟ್ಟಿಗಳ ನಿರ್ಮಾಣದಿಂದ 300 ಮೀಟರ್ ಉದ್ದದ ಕ್ರೂಸ್ ಮತ್ತು ಪ್ರಯಾಣಿಕ ಹಡಗುಗಳ ವರ್ಷಪೂರ್ತಿ ಸಂಚಾರ ಸಾಧ್ಯವಾಗಲಿದೆ. ಜೊತೆಗೆ ಪ್ರಯಾಣಿಕರು ಹಾಗೂ ಸರಕು ನಿರ್ವಹಣೆ, ಮೀನು ಸಂಸ್ಕರಣೆ, ಇಂಧನ ವಿತರಣೆ, ಹಿಮ ಸರಬರಾಜು ಮತ್ತು ದೋಣಿ ದುರಸ್ತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
ಈ ಮಹತ್ವಾಕಾಂಕ್ಷಿ ಯೋಜನೆಗಳು ಗುಜರಾತ್, ದಮನ್ ಹಾಗೂ ಲಕ್ಷದ್ವೀಪದ ಮೂಲಸೌಕರ್ಯ, ಆರೋಗ್ಯ, ಕೈಗಾರಿಕೆ, ಪ್ರವಾಸೋದ್ಯಮ ಮತ್ತು ಸಮುದ್ರ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.