
ನವದೆಹಲಿ, 04 ಜೂನ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ಅಭ್ಯರ್ಥಿ ಆಕಾಂಕ್ಷಾ ಚತುರ್ವೇದಿ ಆತ್ಮಹತ್ಯೆ ಪ್ರಕರಣವನ್ನು ಲೋಕ ಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದು, ಇದು ಭ್ರಷ್ಟ ಮತ್ತು ವಿಫಲ ಶಿಕ್ಷಣ ವ್ಯವಸ್ಥೆಯ ಪರಿಣಾಮ ಎಂದು ಆರೋಪಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ದೇಶದ ಶಿಕ್ಷಣ ವ್ಯವಸ್ಥೆಗೆ ಗಂಭೀರ ಹಾನಿಯಾಗಿದ್ದು, ಅದರ ದುಷ್ಪರಿಣಾಮಗಳನ್ನು ದೇಶದ ಯುವಜನತೆ ಅನುಭವಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸಂದೇಶದಲ್ಲಿ ರಾಹುಲ್ ಗಾಂಧಿ, ಆಕಾಂಕ್ಷಾ ವೈದ್ಯೆಯಾಗುವ ಮೂಲಕ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಕನಸು ಹೊಂದಿದ್ದಳು ಎಂದು ತಿಳಿಸಿದ್ದಾರೆ. ಆಕೆಯ ತಂದೆ ರೈತರಾಗಿದ್ದು, ಮಗಳ ಶಿಕ್ಷಣಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಮೂರು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅಲ್ಲದೆ ನಾಗ್ಪುರದಲ್ಲಿ ಅಡುಗೆಗಾರರಾಗಿ ಕೆಲಸ ಮಾಡುತ್ತ ಮಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
ಕುಟುಂಬವು ತಮ್ಮಿಂದಾದ ಎಲ್ಲ ರೀತಿಯ ತ್ಯಾಗ ಮತ್ತು ಪ್ರಯತ್ನಗಳನ್ನು ಮಾಡಿದರೂ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹಾಗೂ ಪರೀಕ್ಷೆಯ ಸುತ್ತಲಿನ ಅನಿಶ್ಚಿತತೆಯಿಂದ ಆಕಾಂಕ್ಷಾ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮೇಲೂ ಅವರು ಟೀಕೆ ಮಾಡಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಕೇವಲ ಸಮಿತಿಗಳ ರಚನೆ ಮತ್ತು ತನಿಖೆಗಳ ಘೋಷಣೆ ಮಾತ್ರ ನಡೆದಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಪರಿಣಾಮಕಾರಿ ಸುಧಾರಣೆ ಆಗಿಲ್ಲ. ತಪ್ಪಿತಸ್ಥರ ವಿರುದ್ಧವೂ ಕಠಿಣ ಕ್ರಮ ಜರುಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮಧ್ಯ ಪ್ರದೇಶದ ಮೌಗಂಜ್ ಜಿಲ್ಲೆಯ ನಿವಾಸಿಯಾಗಿದ್ದ 18 ವರ್ಷದ ಆಕಾಂಕ್ಷಾ ಚತುರ್ವೇದಿ ನಾಗ್ಪುರದಲ್ಲಿ ನೆಲೆಸಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಮೇ 20ರಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆಯ ಕೆಲವು ದಿನಗಳ ನಂತರ ಕುಟುಂಬಕ್ಕೆ ಆಕೆ ಬರೆದಿದ್ದ ಕೈಬರಹದ ಪತ್ರ ದೊರೆತಿತ್ತು.
ಪತ್ರದಲ್ಲಿ ತನ್ನ ತಂದೆ-ತಾಯಿಗಳಿಗೆ ಕ್ಷಮೆಯಾಚಿಸಿದ್ದ ಆಕಾಂಕ್ಷಾ, ಅವರು ತನ್ನಿಂದ ವೈದ್ಯೆಯಾಗುವ ನಿರೀಕ್ಷೆ ಹೊಂದಿದ್ದರು. ಆದರೆ ಮತ್ತೊಮ್ಮೆ ನೀಟ್ ಪರೀಕ್ಷೆ ಎದುರಿಸುವ ಧೈರ್ಯ ತನ್ನಲ್ಲಿ ಉಳಿದಿಲ್ಲ ಎಂದು ಬರೆದಿದ್ದಳು. ಮೊದಲ ಪ್ರಯತ್ನದಲ್ಲೇ ಉತ್ತಮ ಅಂಕಗಳನ್ನು ಪಡೆಯುವ ವಿಶ್ವಾಸವಿದ್ದರೂ, ಉಂಟಾದ ಪರಿಸ್ಥಿತಿಗಳಿಂದ ತನ್ನ ಆತ್ಮವಿಶ್ವಾಸ ಸಂಪೂರ್ಣವಾಗಿ ಕುಸಿದಿದೆ ಎಂದು ಆಕೆ ಉಲ್ಲೇಖಿಸಿದ್ದಳು.
ಭವಿಷ್ಯದ ಬಗ್ಗೆ ನಂಬಿಕೆ ಕಳೆದುಕೊಂಡಿರುವುದಾಗಿ ಪತ್ರದಲ್ಲಿ ಬರೆದಿದ್ದ ಆಕಾಂಕ್ಷಾ, ತಂದೆ-ತಾಯಿಯ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಿದ್ದಳು ಎಂದು ತಿಳಿದು ಬಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.