
ನವದೆಹಲಿ, 04 ಜೂನ್ (ಹಿ.ಸ.) :
ಆ್ಯಂಕರ್ : ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕಾಂಶದ ಅಗತ್ಯಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–6ರ (ಎನ್ಎಫ್ಎಚ್ಎಸ್–6) ಪ್ರಮುಖ ಅಂಕಿಅಂಶಗಳನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದೆ ಮುಚ್ಚಿಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಖರ್ಗೆ, ಎನ್ಎಫ್ಎಚ್ಎಸ್–6 ಸಮೀಕ್ಷೆಯ ಅಂಕಿಅಂಶಗಳು ಕೇಂದ್ರ ಸರ್ಕಾರದ ವೈಫಲ್ಯ ಮತ್ತು ಆಡಳಿತಾತ್ಮಕ ಅಸಮರ್ಥತೆಯನ್ನು ಬಯಲಿಗೆಳೆಯುತ್ತವೆ ಎಂದು ಹೇಳಿದ್ದಾರೆ.
ಅವರ ಪ್ರಕಾರ, ದೇಶದಲ್ಲಿ ಪ್ರತಿ ಐದು ಮಕ್ಕಳಲ್ಲಿ ಒಬ್ಬ ಮಗು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ. ಮೂರರಲ್ಲಿ ಒಬ್ಬ ಮಗು ಕಡಿಮೆ ತೂಕ ಹೊಂದಿದ್ದು, ಆರು ತಿಂಗಳಿಂದ 23 ತಿಂಗಳ ವಯಸ್ಸಿನ ಶೇ.84ರಷ್ಟು ಮಕ್ಕಳಿಗೆ ಅಗತ್ಯ ಪ್ರಮಾಣದ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ.
ಇದೇ ವೇಳೆ, 15ರಿಂದ 49 ವರ್ಷದ ವಯೋಮಾನದ ಶೇ.57ರಷ್ಟು ಮಹಿಳೆಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರತಿ ಐದು ಮಹಿಳೆಯರಲ್ಲಿ ಒಬ್ಬರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಖರ್ಗೆ ತಿಳಿಸಿದ್ದಾರೆ.
ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಆಯ್ದ ಅಂಕಿಅಂಶಗಳನ್ನು ಮಾತ್ರ ಪ್ರಕಟಿಸುವ ಹಾಗೂ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುವ ನೀತಿಯನ್ನು ಅನುಸರಿಸುತ್ತಿದೆ. ಇದರಿಂದ ದೇಶದ ನೈಜ ಆರೋಗ್ಯ ಮತ್ತು ಪೌಷ್ಟಿಕಾಂಶದ ಪರಿಸ್ಥಿತಿ ಜನರ ಮುಂದೆ ಸಂಪೂರ್ಣವಾಗಿ ಬರುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯ, ಪೌಷ್ಟಿಕಾಂಶ ಹಾಗೂ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಮತ್ತು ಸಮೀಕ್ಷೆಯ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.