
ರಾಯಚೂರು, 30 ಜೂನ್ (ಹಿ.ಸ.) :
ಆ್ಯಂಕರ್ : ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಪತ್ರಕರ್ತರ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆಯ ಫಲಿತಾಂಶ ಬಂದಿದ್ದು ರಾಯಚೂರು ಜಿಲ್ಲೆಯ ನಾಲ್ವರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರ ಅತ್ಯುತ್ತಮ ಕಥೆ, ಕವನಗಳು ಬಹುಮಾನ ಪಡೆದಿವೆ ಎಂದು ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಕಥಾ ಸ್ಪರ್ಧೆಯಲ್ಲಿ ಚಿತ್ರದುರ್ಗದ ಪ್ರಜಾವಾಣಿಯ ಸಹಾಯಕ ವರದಿಗಾರ ಕೆ.ಪಿ.ಓಂಕಾರಮೂರ್ತಿ ಅವರ 'ಡೆಡ್ಲೈನ್' ಕಥೆಗೆ ಪ್ರಥಮ, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮೈಸೂರು ವಿಶೇಷ ವರದಿಗಾರ ಶ್ರೀನಿವಾಸ ಎಂ ಅವರ 'ನಿಧನ ವಾರ್ತೆ' ಕಥೆಗೆ ದ್ವಿತೀಯ , ಉದಯವಾಣಿ ಪತ್ರಿಕೆಯ ರಾಯಚೂರು ಜಿಲ್ಲಾ ಹಿರಿಯ ವರದಿಗಾರ ಸಿದ್ದಯ್ಯಸ್ವಾಮಿ ಕುಕನೂರು ಅವರ 'ಪ್ರೆಸಿಡೆಂಟ್ ಶಂಕ್ರ' ಕಥೆ ತೃತೀಯ ಸ್ಥಾನ ಪಡೆದಿದೆ. ಅಲ್ಲದೆ, ಪ್ರಜಾವಾಣಿಯ ಮುದಗಲ್ ವರದಿಗಾರ ಡಾ.ಶರಣಪ್ಪ ಆನಾಹೊಸೂರ ಅವರ 'ನಮ್ಮ ಹುಡ್ರು', ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ರಾಯಚೂರು ಜಿಲ್ಲಾ ವರದಿಗಾರ ಬಸವರಾಜ ಭೋಗಾವತಿ ಅವರ 'ಕಪ್ಪು ಬಣ್ಣದ ಬೂಟು' , ಉದಯವಾಣಿ ದಕ್ಷಿಣ ಕನ್ನಡದ ಮಣಿಪಾಲ ಆವೃತ್ತಿ ಹಿರಿಯ ಉಪಸಂಪಾದಕ ಅನಿಲ್ ಕುಮಾರ ಕೈರಂಗಳ ಅವರ 'ಹಪ್ಪಳ ಸ್ವಾಮಿ' ಕಥೆ ತೀರ್ಪುಗಾರರ ಮೆಚ್ಚುಗೆ ಪಡೆದಿವೆ ಎಂದರು.
ಇನ್ನೂ ಕವನಗಳ ವಿಭಾಗದಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮೈಸೂರು ವಿಶೇಷ ವರದಿಗಾರ ಶ್ರೀನಿವಾಸ ಎಂ. ಅವರ ಮುಸ್ಸಂಜೆಯ ಕಥೆಗಳು ಪ್ರಥಮ, ಬೆಂಗಳೂರಿನ ಹಿರಿಯ ಪತ್ರಕರ್ತರು,ಅಂಕಣಕಾರರಾದ ಶಂಕರ ಪಾಗೋಜಿ ಅವರ 'ಧರ್ಮ ದಳ್ಳುರಿ' ಹಾಗೂ ಬಿಟಿವಿ ರಾಯಚೂರು ಜಿಲ್ಲಾ ವರದಿಗಾರ ಚಂದಪ್ಪ ದೊರನಹಳ್ಳಿ ಅವರ ಹೆತ್ತ ‘ವನ’ ಸೆರಗಿನ ಚಪ್ಪರ ಕವನಗಳು ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದರೆ, ಯಲಬುರ್ಗಾ ತಾಲೂಕು ವರದಿಗಾರ ಉಮಾಶಂಕರ ಹಿರೇಮಠ ಅವರ 'ಅಂಧ ಭಕ್ತರು' ಕವನ ತೃತೀಯ ಸ್ಥಾನ ಪಡೆದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕು ವರದಿಗಾರ ಭೀಮಸೇನರಾವ್ ಕೆ. ಕುಲಕರ್ಣಿ ವಜ್ಜಲ್ ಅವರ 'ನಾಡದೇವಿ ನಿನ್ನ ನೆನೆದು' ಕವನ, ದಕ್ಷಿಣ ಕನ್ನಡದ ಹಿರಿಯ ಉಪ ಸಂಪಾದಕ ಅನಿಲ್ಕುಮಾರ ಕೈರಂಗಳ ಅವರ 'ಭಾವುಕರಾಗುವ ಮುನ್ನ' ಕವನ, ದಾವಣಗೆರೆ ಜಿಲ್ಲೆಯ ಹಿರಿಯ ವರದಿಗಾರ ಬಸವರಾಜ ಕೆ.ಜಿ ಅವರ 'ಸಾವೇ ಇಲ್ಲದ ಪ್ರೀತಿಗಾಗಿ 'ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ ಎಂದು ಹೇಳಿದರು.
ಕಥೆಗಳ ತೀರ್ಪುಗಾರರಾಗಿ ಖ್ಯಾತ ಕಥೆಗಾರರಾದ ಮಹಾಂತೇಶ ನವಲಕಲ್, ಕವನ ಸ್ಪರ್ಧೆ ತೀರ್ಪುಗಾರರಾಗಿ ಹಿರಿಯ ಪತ್ರಕರ್ತ, ಕವಿಗಳಾದ ತುರುವೀಹಾಳ ಚಂದ್ರು ಜವಾಬ್ದಾರಿ ನಿರ್ವಹಿಸಿದ್ದು, ಅವರಿಗೆ ಗಿಲ್ಡ್ ನಿಂದ ಈ ಮೂಲಕ ಧನ್ಯವಾದಗಳನ್ನ ಅರ್ಪಿಸುತ್ತೇವೆ ಎಂದರು.
ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರಿಗೆ 10 ಸಾವಿರ ರೂ, ದ್ವಿತೀಯ ಸ್ಥಾನಕ್ಕೆ 7 ಸಾವಿರ ರೂ , ತೃತೀಯ ಸ್ಥಾನದ ವಿಜೇತರಿಗೆ 3 ಸಾವಿರ ರೂ ನಗದು ಬಹುಮಾನ ಹಾಗೂ ಕವನ ಸ್ಪರ್ಧೆಯ ಪ್ರಥಮ ಬಹುಮಾನ 5 ಸಾವಿರ ರೂ., ದ್ವಿತಿಯ 3 ಸಾವಿರ ರೂ, ತೃತೀಯ ಸ್ಥಾನ ಪಡೆದವರಿಗೆ 2 ಸಾವಿರ ರೂ. ಬಹುಮಾನ ನೀಡಲಾಗುವುದು. ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ ಹಾಗೂ ಕವನಗಳಿಗೆ 1 ಸಾವಿರ ರೂಪಾಯಿ ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ ಅಂತ ತಿಳಿಸಿದರು.
ಸ್ಪರ್ಧಾ ವಿಜೇತರಿಗೆ ಆಗಸ್ಟ್ ಕೊನೆ ವಾರದಲ್ಲಿ ಹಮ್ಮಿಕೊಂಡಿರುವ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು. ಬಹುಮಾನಕ್ಕೆ ಆಯ್ಕೆಯಾದ ಕಥೆ, ಕವನಗಳ ಜೊತೆಗೆ ತೀರ್ಪುಗಾರರ ಗಮನ ಸೆಳೆದ ಇನ್ನಿತರ ಕಥೆ ಕವನಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ, ಜಂಟಿ ಕಾರ್ಯದರ್ಶಿ ಶ್ರೀಕಾಂತ ಸಾವೂರು, ಸದಸ್ಯರಾದ ಚನ್ನಬಸವ ಬಾಗಲವಾಡ, ಖಾನ್ಸಾಬ್ ಮೋಮಿನ್, ಆನಂದ ವಿ.ಕೆ., ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್