
ಬಳ್ಳಾರಿ, 30 ಜೂನ್ (ಹಿ.ಸ.) :
ಆ್ಯಂಕರ್ : ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾಯೋಜನೆಯಡಿ ನೋಂದಾಯಿಸಿಕೊಳ್ಳಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನ ಅಧಿಸೂಚಿತ ಘಟಕಗಳಲ್ಲಿ ಸಂಭವಿಸಬಹುದಾದ ಹವಾಮಾನ ವೈಪರೀತ್ಯಗಳಾದ ಅಧಿಕ ಮಳೆ, ನೆರೆ/ಪ್ರವಾಹ, ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ, ತೀವ್ರ ಬರಗಾಲ ಹಾಗೂ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಮೇಘಸ್ಫೋಟ, ನೈಸರ್ಗಿಕ ಬೆಂಕಿ ಅವಗಡಗಳಿಂದ ಮತ್ತು ಕೊಯ್ಲೋತ್ತರ ನಷ್ಟಗಳಿಂದ ಬೆಳೆ ಹಾನಿ ಉಂಟಾದಲ್ಲಿ ನಿಯಮಾನುಸಾರ ವಿಮಾ ಸಂಸ್ಥೆಗಳ ಮೂಲಕ ಬೆಳೆ ನಷ್ಟ ಪರಿಹಾರವನ್ನು ರೈತರಿಗೆ ಒದಗಿಸುವ ಪ್ರಮುಖ ಉದ್ದೇಶವಾಗಿದೆ.
ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿಗೆ ಕೆಂಪು ಮೆಣಸಿನಕಾಯಿ (ನೀರಾವರಿ) ಮತ್ತು ಈರುಳ್ಳಿ (ನೀರಾವರಿ) ಬೆಳೆಗಳನ್ನು ವಿಮಾ ಯೋಜನೆಯಡಿ ಒಳಪಡಿಸಲಾಗಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಎಸ್.ಬಿ.ಐ ಜನರಲ್ ಇನ್ಶೂರೆನ್ಸ್ ಕಂಪನಿ ವಿಮಾ ಸಂಸ್ಥೆಯಾಗಿ ಆಯ್ಕೆಯಾಗಿರುತ್ತದೆ.
ಬೆಳೆವಾರು ವಿಮಾ ವಿವರ:
ಕೆಂಪು ಮೆಣಸಿನಕಾಯಿ (ನೀರಾವರಿ): ಪ್ರತಿ ಹೆಕ್ಟೇರ್ ಗೆ ರೂ. 1,24,500 ವಿಮಾ ಮೊತ್ತ ನಿಗದಿಯಾಗಿದ್ದು, ರೈತರು ಶೇ.5 ರಷ್ಟು ಪ್ರೀಮಿಯಂ ಮೊತ್ತ ರೂ. 6,225 ಪಾವತಿಸಬೇಕಿರುತ್ತದೆ. (ಒಳಪಡುವ ಹೋಬಳಿಗಳು: ಕಂಪ್ಲಿ, ಕುರುಗೋಡು, ಕೋಳೂರು, ಬಳ್ಳಾರಿ, ಮೋಕಾ, ರೂಪನಗುಡಿ, ಸಿರುಗುಪ್ಪ, ಕರೂರು, ತೆಕ್ಕಲಕೋಟೆ, ಹಚ್ಚೊಳ್ಳಿ, ಸಂಡೂರು, ತೋರಣಗಲ್ಲು).
ಈರುಳ್ಳಿ (ನೀರಾವರಿ): ಪ್ರತಿ ಹೆಕ್ಟೇರ್ ಗೆ ರೂ. 93,900 ವಿಮಾ ಮೊತ್ತ ನಿಗದಿಯಾಗಿದ್ದು, ರೈತರು ಶೇ.5 ರಷ್ಟು ಪ್ರೀಮಿಯಂ ಮೊತ್ತ ರೂ. 4,695 ಪಾವತಿಸಬೇಕಿರುತ್ತದೆ. (ಒಳಪಡುವ ಹೋಬಳಿಗಳು: ಸಂಡೂರು, ಚೋರನೂರು, ತೋರಣಗಲ್ಲು).
ನೋಂದಣಿ ಕೇಂದ್ರಗಳು ಹಾಗೂ ಅಗತ್ಯ ದಾಖಲೆಗಳು:
ಅರ್ಹ ರೈತರು ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘಗಳಲ್ಲಿ ವಿಮೆ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಇತ್ತೀಚಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಸ್ವಯಂ ದೃಢೀಕರಣ ಪತ್ರ ಹಾಗೂ ಎಫ್.ಐ.ಡಿ ದಾಖಲೆಗಳು ಅತ್ಯಗತ್ಯವಾಗಿವೆ.
ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಬಳ್ಳಾರಿ, ಕಂಪ್ಲಿ, ಕುರುಗೋಡು: 08392-278177, 9480257282, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಸಂಡೂರು: 08395-260389, 9740934208, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಸಿರುಗುಪ್ಪ: 08396-222066, 9448910277 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್