
ಬೆಳಗಾವಿ, 30 ಜೂನ್ (ಹಿ.ಸ.) :
ಆ್ಯಂಕರ್ : ಹಾಸ್ಯಪ್ರಿಯರಿಗಾಗಿ ಜುಲೈ ತಿಂಗಳಲ್ಲಿ ಹಾಸ್ಯಕೂಟದ ವತಿಯಿಂದ ಬೆಳಗಾವಿಯಲ್ಲಿ ಎರಡು ವಿಶೇಷ ಹಾಸ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮೊದಲ ಕಾರ್ಯಕ್ರಮವು ಜುಲೈ 11ರಂದು (ಎರಡನೇ ಶನಿವಾರ) ನಗರದ ಚೆನ್ನಮ್ಮ ವೃತ್ತದ ಸಮೀಪದ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಕಳೆದ 12 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಮಾಸಿಕ ಹಾಸ್ಯಕೂಟದಲ್ಲಿ ಈ ಬಾರಿ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ವಿಶ್ವನಾಥ್ ಅವರು ಭಾಗವಹಿಸಲಿದ್ದಾರೆ. ಅವರು ರಚಿಸಿರುವ ವ್ಯಂಗ್ಯಚಿತ್ರಗಳ ಪ್ರದರ್ಶನದ ಜೊತೆಗೆ ತಮ್ಮ ವಿಶಿಷ್ಟ ನಗೆಮಾತುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷರು, ಮುಖ್ಯ ಅತಿಥಿಗಳು ಹಾಗೂ ಮಾಸಿಕ ಪ್ರಾಯೋಜಕರ ಹೆಸರುಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಇನ್ನೊಂದು ವಿಶೇಷ ಕಾರ್ಯಕ್ರಮ ಜುಲೈ 18ರಂದು (ಶನಿವಾರ) ಸಂಜೆ 4.30ಕ್ಕೆ ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಹಯೋಗದಲ್ಲಿ ನೆಹರೂನಗರದ ರಾಮದೇವ ಹೋಟೆಲ್ ಸಮೀಪದ ಕನ್ನಡ ಭವನದಲ್ಲಿ ನಕ್ಕು ಹಗುರಾಗಿ ಎಂಬ ಶೀರ್ಷಿಕೆಯಡಿ ನಡೆಯಲಿದೆ.
ಈ ಹಾಸ್ಯ ಕಾರ್ಯಕ್ರಮದಲ್ಲಿ ಗುಂಡೇನಟ್ಟಿ ಮಧುಕರ, ಜಿ. ಎಸ್. ಸೋನಾರ, ಅರವಿಂದ ಹುನಗುಂದ್ ಹಾಗೂ ಎಂ. ಬಿ. ಹೊಸಳ್ಳಿ ಹಾಸ್ಯ ಭಾಷಣಗಳನ್ನು ನೀಡಲಿದ್ದು, ತಾನಾಜಿ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ಎರಡೂ ಕಾರ್ಯಕ್ರಮಗಳಿಗೆ ಹಾಸ್ಯಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಗುವಿನ ಸಡಗರದಲ್ಲಿ ಭಾಗವಹಿಸುವಂತೆ ಹಾಸ್ಯಕೂಟದ ಪರವಾಗಿ ಗುಂಡೇನಟ್ಟಿ ಮಧುಕರ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.