
ಕೋಲ್ಕತ್ತಾ, 03 ಜೂನ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನ ಸಭೆಯಲ್ಲಿ ಪ್ರತಿ ಪಕ್ಷದ ನಾಯಕನ ಆಯ್ಕೆ ಕುರಿತಂತೆ ನಡೆಯುತ್ತಿರುವ ವಿವಾದದ ನಡುವೆ ಬುಧವಾರ ಮಹತ್ವದ ರಾಜಕೀಯ ವಿದ್ಯಮಾನಗ ನಡೆದಿದೆ. ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಋತಬ್ರತ ಬಂದ್ಯೋಪಾಧ್ಯಾಯ ಅವರು 59 ಶಾಸಕರ ಬೆಂಬಲ ಪತ್ರಗಳೊಂದಿಗೆ ವಿಧಾನ ಸಭೆಗೆ ಆಗಮಿಸಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಋತಬ್ರತ ವಿಧಾನ ಸಭೆಗೆ ಬಂದ ಬಳಿಕ ತೃಣಮೂಲ ಕಾಂಗ್ರೆಸ್ ಶಾಸಕರು ಸಹ ಒಬ್ಬೊಬ್ಬರಾಗಿ ವಿಧಾನ ಸಭಾ ಆವರಣಕ್ಕೆ ಆಗಮಿಸಿದರು. ಅರೂಪ್ ರಾಯ್, ಶಿಯೂಲಿ ಸಾಹಾ, ಅಖುಜ್ಜಾಮಾನ್ ಹಾಗೂ ಸಬೀನಾ ಯಾಸ್ಮಿನ್ ಸೇರಿದಂತೆ ಹಲವು ಶಾಸಕರು ಸಭೆಯಲ್ಲಿ ಭಾಗವಹಿಸಿದರು.
ಈ ವೇಳೆ ಮಾತನಾಡಿದ ಸಬೀನಾ ಯಾಸ್ಮಿನ್, ಪ್ರತಿ ಪಕ್ಷದ ನಾಯಕನ ಆಯ್ಕೆ ಕುರಿತು ಶಾಸಕರ ಸಭೆ ನಡೆಯಲಿದೆ ಎಂದು ತಿಳಿಸಿದರು. ಸಭೆಯನ್ನು ಯಾರು ಕರೆದಿದ್ದಾರೆ ಎಂಬ ಪ್ರಶ್ನೆಗೆ, “ನಾವೆಲ್ಲರೂ ಸೇರಿ ಈ ಸಭೆ ಕರೆದಿದ್ದೇವೆ” ಎಂದು ಉತ್ತರಿಸಿದರು.
ಕಳೆದ ಕೆಲವು ದಿನಗಳಿಂದ ಪ್ರತಿ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯಲ್ಲಿ ಸಹಿ ದುರ್ಬಳಕೆ ನಡೆದಿದೆ ಎಂಬ ಆರೋಪಗಳು ತೃಣಮೂಲ ಕಾಂಗ್ರೆಸ್ ಒಳಗೆ ಅಸಮಾಧಾನಕ್ಕೆ ಕಾರಣವಾಗಿವೆ. ಈ ನಡುವೆಯೇ ವಿಧಾನಸಭಾಧ್ಯಕ್ಷರು ಇನ್ನೂ ಯಾವುದೇ ಶಾಸಕರ ಹೆಸರನ್ನು ಪ್ರತಿ ಪಕ್ಷದ ನಾಯಕನಾಗಿ ಅಧಿಕೃತವಾಗಿ ಘೋಷಿಸಿಲ್ಲ. ಇದರಿಂದ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಮತ್ತಷ್ಟು ಬಹಿರಂಗವಾಗಿವೆ.
ವಿಧಾನ ಸಭೆಗೆ ಆಗಮಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಋತಬ್ರತ ಬಂದ್ಯೋಪಾಧ್ಯಾಯ, “ನಾನು ಇಲ್ಲಿ ಕೇವಲ ವಿಧಾನ ಸಭೆಯ ಕೆಲಸಕ್ಕಾಗಿ ಬಂದಿದ್ದೇನೆ. ಉಳಿದ ಎಲ್ಲ ಮಾತುಗಳು ಕೇವಲ ಊಹಾಪೋಹಗಳು” ಎಂದು ಹೇಳಿದರು. ತಮ್ಮೊಂದಿಗೆ 50ಕ್ಕೂ ಹೆಚ್ಚು ಶಾಸಕರು ಇದ್ದಾರೆಯೇ ಎಂಬ ಪ್ರಶ್ನೆಗೆ, “ನಾನು, ನನ್ನ ಹಾಗೂ ಸಂದೀಪನ್ ಸಾಹಾ ಅವರನ್ನು ಹೊರತುಪಡಿಸಿ ಬೇರೆ ಯಾರ ಪರವಾಗಿ ಮಾತನಾಡುವುದಿಲ್ಲ” ಎಂದು ಪ್ರತಿಕ್ರಿಯಿಸಿದರು.
ಮಂಗಳವಾರ ಭಾರತೀಯ ಜನತಾ ಪಕ್ಷದ ಶಾಸಕ ತಾಪಸ್ ರಾಯ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಕೂಡ ಈ ವಿವಾದಕ್ಕೆ ಹೊಸ ತಿರುವು ನೀಡಿತ್ತು. ಆದರೆ ಆ ಪೋಸ್ಟ್ನಲ್ಲಿ ಉಲ್ಲೇಖಿಸಲಾದ ಹಲವು ವಿಚಾರಗಳನ್ನು ಋತಬ್ರತ ತಳ್ಳಿಹಾಕಿದ್ದು, ತೃಣಮೂಲ ನಾಯಕತ್ವದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನೂ ಮಾಡಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಕಳೆದ ಸೋಮವಾರ ತೃಣಮೂಲ ಕಾಂಗ್ರೆಸ್ ಋತಬ್ರತ ಬಂದ್ಯೋಪಾಧ್ಯಾಯ ಮತ್ತು ಸಂದೀಪನ್ ಸಾಹಾ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಮೇ 6ರಂದು ನಡೆದ ಸಭೆಯಲ್ಲಿ ಪ್ರತಿ ಪಕ್ಷದ ನಾಯಕನ ಆಯ್ಕೆ ಕುರಿತು ಯಾವುದೇ ನಿರ್ಣಯ ಕೈಗೊಳ್ಳಲಾಗಿಲ್ಲ ಎಂದು ಇಬ್ಬರೂ ಶಾಸಕರು ಆರೋಪಿಸಿದ್ದಾರೆ. ಕೇವಲ ಹಾಜರಾತಿ ನೋಂದಣಿಯಲ್ಲಿ ಸಹಿ ಪಡೆಯಲಾಗಿದ್ದು, ನಂತರ ಅದೇ ಸಹಿಗಳನ್ನು ನಿರ್ಣಯದ ಬೆಂಬಲವೆಂದು ತೋರಿಸಲಾಗಿದೆ ಎಂದು ಅವರು ದೂರಿದ್ದಾರೆ.
ಈ ಆರೋಪದ ಸಂಬಂಧ ಇಬ್ಬರೂ ಶಾಸಕರು ವಿಧಾನಸಭಾಧ್ಯಕ್ಷರಿಗೆ ಲಿಖಿತ ದೂರು ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಸಹಿ ನಕಲಿ ಪ್ರಕರಣ ಮತ್ತು ಪ್ರತಿ ಪಕ್ಷದ ನಾಯಕನ ಆಯ್ಕೆ ವಿವಾದದ ಹಿನ್ನೆಲೆಯಲ್ಲಿ ಇದೀಗ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿದೆ. ತೃಣಮೂಲ ಕಾಂಗ್ರೆಸ್ ಮುಂದಿನ ನಡೆ ಹಾಗೂ ವಿಧಾನಸಭಾಧ್ಯಕ್ಷರ ನಿರ್ಧಾರದತ್ತ ರಾಜ್ಯದ ರಾಜಕೀಯ ವಲಯದ ಗಮನ ಕೇಂದ್ರೀಕೃತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.