
ನವದೆಹಲಿ, 03 ಜೂನ್ (ಹಿ.ಸ.) :
ಆ್ಯಂಕರ್ : ನಾಗರಿಕರ ಏಕತೆ ಮತ್ತು ಪರಸ್ಪರ ಸಹಕಾರವೇ ರಾಷ್ಟ್ರದ ಶಕ್ತಿಯನ್ನು ಹಲವು ಪಟ್ಟು ಹೆಚ್ಚಿಸುವ ಮೂಲಾಧಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಪ್ರಧಾನಿ ಮೋದಿ, ದೇಶದ ಅಭಿವೃದ್ಧಿ ಮತ್ತು ಉನ್ನತಿಗೆ ನಾಗರಿಕರ ಒಗ್ಗಟ್ಟು ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಅವರು ಮಹಾಭಾರತದ ಉದ್ಯೋಗ ಪರ್ವದಲ್ಲಿರುವ ಪ್ರಸಿದ್ಧ ಶ್ಲೋಕವೊಂದನ್ನು ಉಲ್ಲೇಖಿಸಿದರು.
ಧೂಮಾಯಂತೆ ವ್ಯಪೇತಾನಿ ಜ್ವಲಂತಿ ಸಹಿತಾನಿ ಚ।
ಧೃತರಾಷ್ಟ್ರೋಲ್ಮುಕಾನೀವ ಜ್ಞಾತಯೋ ಭರತರ್ಷಭ॥
ಎಂಬ ಶ್ಲೋಕವನ್ನು ಹಂಚಿಕೊಂಡ ಪ್ರಧಾನಿ, “ನಾಗರಿಕರು ಏಕತೆ ಮತ್ತು ಪರಸ್ಪರ ಸಹಕಾರದ ಬಂಧದಲ್ಲಿ ಒಂದಾದಾಗ ರಾಷ್ಟ್ರದ ಶಕ್ತಿ ಅನೇಕ ಪಟ್ಟು ಹೆಚ್ಚುತ್ತದೆ. ಭಾರತದ ಜನರ ಈ ಸಾಮೂಹಿಕ ಸಂಕಲ್ಪದ ಫಲವಾಗಿ ದೇಶ ಇಂದು ಅಭಿವೃದ್ಧಿಯ ನೂತನ ಶಿಖರಗಳನ್ನು ಮುಟ್ಟುತ್ತಿದೆ” ಎಂದು ತಿಳಿಸಿದ್ದಾರೆ.
ಈ ಶ್ಲೋಕವು ಸಂಘಟನೆಯ ಮಹತ್ವವನ್ನು ಸಾರುತ್ತದೆ. ಪ್ರತ್ಯೇಕವಾಗಿರುವ ಕಟ್ಟಿಗೆಗಳು ಕೇವಲ ಹೊಗೆಯನ್ನು ಹೊರಹಾಕುತ್ತವೆ. ಆದರೆ ಅವು ಒಂದಾಗಿ ಸೇರಿದ್ದಾಗ ಪ್ರಜ್ವಲಿಸಿ ಬೆಳಕು ಮತ್ತು ಶಕ್ತಿಯನ್ನು ನೀಡುತ್ತವೆ. ಅದೇ ರೀತಿ ಸಮಾಜ ಹಾಗೂ ಕುಟುಂಬದ ಸದಸ್ಯರು ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಎಂತಹ ಸಂಕಷ್ಟವನ್ನೂ ಸಮರ್ಥವಾಗಿ ಎದುರಿಸಬಹುದು ಎಂಬ ಸಂದೇಶವನ್ನು ಇದು ನೀಡುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.