ಡಿ.ಕೆ. ಶಿವಕುಮಾರ್ ರಾಜಕೀಯ ಪಯಣ
ಬೆಂಗಳೂರು, 03 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಗ್ರಾಮೀಣ ಹಿನ್ನೆಲೆಯಿಂದ ಹೊರಹೊಮ್ಮಿ, ತಮ್ಮ ಸಂಘಟನಾ ಸಾಮರ್ಥ್ಯ, ರಾಜಕೀಯ ಚಾತುರ್ಯ ಮತ್ತು ಹೋರಾಟದ ಮನೋಭಾವದ ಮೂಲಕ ರಾಜ್ಯದ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ನಾಯಕರ ಪೈಕಿ ಡಿ.ಕೆ. ಶಿವಕುಮಾರ್ ಪ್ರಮ
D.k.Shivkumar file photo


ಬೆಂಗಳೂರು, 03 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಗ್ರಾಮೀಣ ಹಿನ್ನೆಲೆಯಿಂದ ಹೊರಹೊಮ್ಮಿ, ತಮ್ಮ ಸಂಘಟನಾ ಸಾಮರ್ಥ್ಯ, ರಾಜಕೀಯ ಚಾತುರ್ಯ ಮತ್ತು ಹೋರಾಟದ ಮನೋಭಾವದ ಮೂಲಕ ರಾಜ್ಯದ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ನಾಯಕರ ಪೈಕಿ ಡಿ.ಕೆ. ಶಿವಕುಮಾರ್ ಪ್ರಮುಖರು. ಕಾಂಗ್ರೆಸ್ ಪಕ್ಷದ ಪ್ರಬಲ ಸಂಘಟಕ, ತಂತ್ರಗಾರ ಹಾಗೂ ಟ್ರಬಲ್ಶೂಟರ್ ಎಂದೇ ಗುರುತಿಸಿಕೊಂಡಿರುವ ಅವರು, ಮೂರು ದಶಕಗಳಿಗೂ ಅಧಿಕ ಕಾಲದ ರಾಜಕೀಯ ಅನುಭವದೊಂದಿಗೆ ರಾಜ್ಯದ ನಾಯಕತ್ವ ವಹಿಸಲು ಸಜ್ಜಾಗಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ 1962ರ ಮೇ 15ರಂದು ಜನಿಸಿದ ಡಿ.ಕೆ. ಶಿವಕುಮಾರ್ ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು. ತಂದೆ ಕೆಂಪೇಗೌಡ ಹಾಗೂ ತಾಯಿ ಗೌರಮ್ಮ ಅವರ ಪುತ್ರರಾಗಿರುವ ಅವರು, ಬಾಲ್ಯದಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಿದ್ದರು. ವಿದ್ಯಾರ್ಥಿ ಜೀವನದಲ್ಲಿಯೇ ರಾಜಕೀಯದತ್ತ ಆಸಕ್ತಿ ಬೆಳೆಸಿಕೊಂಡ ಶಿವಕುಮಾರ್, ಯುವ ಕಾಂಗ್ರೆಸ್ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದರು.

1989ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಅವರು ವಿಧಾನಸಭೆ ಪ್ರವೇಶಿಸಿದರು. ಬಳಿಕ ನಡೆದ ಚುನಾವಣೆಗಳಲ್ಲೂ ನಿರಂತರವಾಗಿ ಜನರ ವಿಶ್ವಾಸ ಗಳಿಸಿ, ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವವನ್ನು ನಿರ್ಮಿಸಿಕೊಂಡರು. ಸಾತನೂರು ಕ್ಷೇತ್ರ ಪುನರ್ವಿಂಗಡಣೆಯಾದ ನಂತರ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು, ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ.

ರಾಜಕೀಯ ಜೀವನದಲ್ಲಿ ಶಾಸಕನಷ್ಟೇ ಅಲ್ಲದೆ ಸಚಿವರಾಗಿಯೂ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇಂಧನ, ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು, ಕಾವೇರಿ ನೀರಿನ ನಿರ್ವಹಣೆ, ಮೇಕೆದಾಟು ಯೋಜನೆ ಹಾಗೂ ಬೆಂಗಳೂರು ಅಭಿವೃದ್ಧಿ ಯೋಜನೆಗಳ ಮೂಲಕ ಗಮನ ಸೆಳೆದಿದ್ದಾರೆ.

ರಾಷ್ಟ್ರೀಯ ರಾಜಕೀಯದಲ್ಲಿಯೂ ತಮ್ಮ ಸಂಘಟನಾ ಸಾಮರ್ಥ್ಯದಿಂದ ಗುರುತಿಸಿಕೊಂಡಿರುವ ಡಿ.ಕೆ. ಶಿವಕುಮಾರ್, ಸಂಕಷ್ಟದ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಸರೆಯಾಗಿದ್ದಾರೆ. ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಸವಾಲುಗಳನ್ನು ಎದುರಿಸಿದ ಸಂದರ್ಭಗಳಲ್ಲಿ ಪಕ್ಷದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಅವರು ವಹಿಸಿದ ಪಾತ್ರದಿಂದ ಕಾಂಗ್ರೆಸ್ ಟ್ರಬಲ್ಶೂಟರ್ ಎಂಬ ಹೆಸರನ್ನು ಪಡೆದರು.

2020ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯಾದ್ಯಂತ ಪಕ್ಷವನ್ನು ಬಲಪಡಿಸುವ ಕಾರ್ಯಕ್ಕೆ ಒತ್ತು ನೀಡಿದರು. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಘಟನೆ ಪುನಶ್ಚೇತನಗೊಂಡು, 2023ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು. ಬಳಿಕ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಆಡಳಿತ ಮತ್ತು ಸಂಘಟನೆಯ ಎರಡೂ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.

ಕುಟುಂಬದ ವಿಚಾರದಲ್ಲಿ ಉಷಾ ಶಿವಕುಮಾರ್ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದಾರೆ. ಅವರ ಸಹೋದರ ಡಿ.ಕೆ. ಸುರೇಶ್ ಕೂಡ ರಾಜ್ಯ ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ.

ಸಾಮಾನ್ಯ ರೈತ ಕುಟುಂಬದಿಂದ ಆರಂಭವಾದ ಪಯಣ, ಯುವ ಕಾಂಗ್ರೆಸ್ ಕಾರ್ಯಕರ್ತನಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷನ ತನಕದ ಬೆಳವಣಿಗೆ, ಅಲ್ಲಿಂದ ಉಪ ಮುಖ್ಯಮಂತ್ರಿ ಹುದ್ದೆ ಮತ್ತು ಈಗ ಮುಖ್ಯಮಂತ್ರಿ ಸ್ಥಾನಕ್ಕೆ ಏರಿರುವುದು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ಮಹತ್ವದ ಅಧ್ಯಾಯವಾಗಿದೆ. ಹೋರಾಟ, ಸಂಘಟನೆ ಮತ್ತು ಜನಸಂಪರ್ಕದ ಮೂಲಕ ಅವರು ಕಟ್ಟಿಕೊಂಡಿರುವ ರಾಜಕೀಯ ಬಲವೇ ಇಂದು ಅವರನ್ನು ಕರ್ನಾಟಕದ ನಾಯಕತ್ವದ ಕೇಂದ್ರಬಿಂದುವಾಗಿಸಿದೆ.

ರಾಜ್ಯದ ಅಭಿವೃದ್ಧಿ, ಸಾಮಾಜಿಕ ಸಮತೋಲನ ಹಾಗೂ ಆಡಳಿತಾತ್ಮಕ ಸವಾಲುಗಳ ನಡುವೆಯೇ ಮುಖ್ಯಮಂತ್ರಿಯಾಗಿ ಅವರ ಮುಂದಿನ ಹೆಜ್ಜೆಗಳು ಕರ್ನಾಟಕ ರಾಜಕೀಯದ ಹೊಸ ದಿಕ್ಕನ್ನು ನಿರ್ಧರಿಸಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande