
ಬೆಂಗಳೂರು, 03 ಜೂನ್ (ಹಿ.ಸ.) :
ಆ್ಯಂಕರ್ : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನತೆಗೆ ಭಾವನಾತ್ಮಕ ಸಂದೇಶ ನೀಡಿದ್ದು, ತಮ್ಮ ರಾಜಕೀಯ ಬದುಕಿನ ಏಳುಬೀಳುಗಳ ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಂತ ಜನತೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಲೋಕ ಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, “ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ ಧೈರ್ಯ ತುಂಬಿ, ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ಕರ್ನಾಟಕದ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದದಿಂದ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಈ ಕ್ಷಣದಲ್ಲಿ ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ತಲೆಬಾಗುತ್ತೇನೆ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯ ಹುದ್ದೆ ಕೇವಲ ಅಧಿಕಾರವಲ್ಲ, ಜನರ ಕನಸುಗಳನ್ನು ನನಸು ಮಾಡುವ ಪವಿತ್ರ ಜವಾಬ್ದಾರಿ ಎಂದು ಬಣ್ಣಿಸಿದ ಅವರು, “ಇಂದು ನನ್ನ ಹೆಗಲ ಮೇಲಿರುವುದು ಕೇವಲ ಮುಖ್ಯಮಂತ್ರಿಯ ಜವಾಬ್ದಾರಿಯಲ್ಲ. ಕೋಟ್ಯಂತರ ಕನ್ನಡಿಗರ ಕನಸುಗಳನ್ನು ನನಸು ಮಾಡುವ ಕರ್ತವ್ಯವೂ ಆಗಿದೆ. ಈ ಅವಕಾಶವನ್ನು ನೀಡಿದ ಹಿರಿಯರು, ಮಾರ್ಗದರ್ಶಕರು ಹಾಗೂ ನನ್ನ ಶಕ್ತಿಯಾಗಿ ನಿಂತ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ತಿಳಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಹೊಸ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿರುವ ಅವರು, ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕರ್ನಾಟಕವನ್ನು ಅಭಿವೃದ್ಧಿಯ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯುವ ಸಂಕಲ್ಪ ವ್ಯಕ್ತಪಡಿಸಿದ್ದಾರೆ.
ರೈತರು, ಶ್ರಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಸೇರಿದಂತೆ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವವೇ ರಾಜ್ಯದ ಸರ್ವತೋಮುಖ ಪ್ರಗತಿಗೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಯಾವುದೇ ಒಬ್ಬ ವ್ಯಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ. ಆದರೆ ನಾವೆಲ್ಲರೂ ಕೈಜೋಡಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಭವಿಷ್ಯದ ಪೀಳಿಗೆ ಹೆಮ್ಮೆಪಡುವಂತಹ ಸುಂದರ, ಸಮೃದ್ಧ ಹಾಗೂ ಪ್ರಗತಿಪರ ಕರ್ನಾಟಕವನ್ನು ಒಟ್ಟಾಗಿ ನಿರ್ಮಿಸೋಣ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.