
ಬೆಂಗಳೂರು, 29 ಜೂನ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಪೆರು ನಡುವಿನ 63 ವರ್ಷಗಳ ನಿರಂತರ ರಾಜತಾಂತ್ರಿಕ ಬಾಂಧವ್ಯ ಹಾಗೂ ಪೆರು ಗಣರಾಜ್ಯದ 205ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾದ ಉನ್ನತ ಮಟ್ಟದ ರಾಜತಾಂತ್ರಿಕ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಭಾಗವಹಿಸಿ ಉಭಯ ದೇಶಗಳ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವನ್ನು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೆರುವಿನ ಲ್ಯಾಟಿನ್ ಅಮೆರಿಕನ್ ವಿಮೋಚನಾ ಚಳುವಳಿಗಳು ಮತ್ತು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತದ ಸ್ವಾತಂತ್ರ್ಯ ಹೋರಾಟದ ನಡುವೆ ಆಳವಾದ ಸಾಮ್ಯತೆಗಳಿವೆ ಎಂದು ಸ್ಮರಿಸಿದರು. ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಮಾನವೀಯ ಮೌಲ್ಯಗಳೇ ಎರಡೂ ರಾಷ್ಟ್ರಗಳನ್ನು ಬೆಸೆಯುವ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.
ಪೆರು ದೇಶದ ರಾಜಧಾನಿ ಲಿಮಾ ಹಾಗೂ ಬೆಂಗಳೂರು ನಗರದ ನಡುವೆ ಐತಿಹಾಸಿಕ 'ಸಿಸ್ಟರ್-ಸಿಟಿ' ಒಪ್ಪಂದ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಉತ್ಸುಕವಾಗಿದೆ ಎಂದು ತಿಳಿಸಿದ ಅವರು, ಈ ಒಪ್ಪಂದದಿಂದ ವ್ಯಾಪಾರ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನೇರ ಸಹಕಾರಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕವು ಭಾರತದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಶೇ.40ಕ್ಕೂ ಅಧಿಕ ಪಾಲು ಹೊಂದಿರುವ ಮುಂಚೂಣಿ ರಾಜ್ಯವಾಗಿದ್ದು, ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಅಭೂತಪೂರ್ವ ಯಶಸ್ಸು ರಾಜ್ಯದ ಹೂಡಿಕೆ ಸ್ನೇಹಿ ವಾತಾವರಣವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದರು.
ಬೆಂಗಳೂರು ಮತ್ತು ಪೆರುವಿನ ಪ್ರಮುಖ ನಗರಗಳ ನಡುವಿನ ಸಾಂಸ್ಥಿಕ ಸಹಯೋಗದಿಂದ ವ್ಯಾಪಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಪರಸ್ಪರ ಅಭಿವೃದ್ಧಿಗೆ ವೇಗ ಸಿಗಲಿದ್ದು, ಭವಿಷ್ಯದಲ್ಲಿ ಭಾರತ–ಪೆರು ನಡುವಿನ 10 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಗುರಿ ಸಾಧಿಸಲು ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಭಾರತದಲ್ಲಿನ ಪೆರು ರಾಯಭಾರಿ ಜೇವಿಯರ್ ಮ್ಯಾನುಯೆಲ್ ಪೌಲಿನಿಚ್ ವೆಲಾರ್ಡ್, ಬೆಂಗಳೂರಿನ ಪೆರುವಿನ ಗೌರವ ಕಾನ್ಸುಲ್ ವಿಕ್ರಮ್ ವಿಶ್ವನಾಥ್, ಸರ್ಕಾರದ ಹಿರಿಯ ಅಧಿಕಾರಿಗಳು, ವಿವಿಧ ದೇಶಗಳ ರಾಜತಾಂತ್ರಿಕರು ಹಾಗೂ ಬೆಂಗಳೂರಿನ ಪ್ರಮುಖ ಉದ್ಯಮಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.