
ಬೆಂಗಳೂರು, 29 ಜೂನ್ (ಹಿ.ಸ.) :
ಆ್ಯಂಕರ್ : ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಲಾಖೆಯ ಕಾರ್ಯವೈಖರಿಯನ್ನು ಸಮಗ್ರವಾಗಿ ಪರಿಶೀಲಿಸಿ, ಬಾಕಿ ಉಳಿದಿರುವ ಅರಣ್ಯ ಅನುಮತಿ ಪ್ರಕರಣಗಳನ್ನು ಜುಲೈ 15ರೊಳಗೆ ಕಡ್ಡಾಯವಾಗಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಧಾನ ಸೌಧದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅರಣ್ಯ ಸಂರಕ್ಷಣೆ, ಅರಣ್ಯವಾಸಿಗಳ ಹಕ್ಕುಗಳು, ಮಾನವ–ವನ್ಯಜೀವಿ ಸಂಘರ್ಷ ತಡೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಮುಖ್ಯಮಂತ್ರಿಗಳು ಮಾತನಾಡಿ, ಗಣಿಗಾರಿಕೆ, ಕೈಗಾರಿಕೆ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಸರ್ಕಾರಿ ಜಮೀನು ಪಡೆದು ವರ್ಷಗಳ ಕಾಲ ಯಾವುದೇ ಕೆಲಸ ಆರಂಭಿಸದೇ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಜಮೀನು ಖಾಲಿ ಬಿಟ್ಟರೆ ಸರ್ಕಾರಕ್ಕೆ ಆದಾಯ ನಷ್ಟವಾಗುವುದರ ಜೊತೆಗೆ ಯೋಜನೆಗಳ ವೆಚ್ಚವೂ ಹೆಚ್ಚುತ್ತದೆ. ಇಂತಹ ವಿಳಂಬವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೈಗಾರಿಕೆ ಹಾಗೂ ಗಣಿಗಾರಿಕೆ ಯೋಜನೆಗಳಿಗೆ ಅಗತ್ಯವಿರುವ ಅರಣ್ಯ ಅನುಮತಿಗಳನ್ನು ನಿಗದಿತ ಕಾಲಮಿತಿಯೊಳಗೆ ನೀಡುವ ವ್ಯವಸ್ಥೆ ರೂಪಿಸಬೇಕು ಎಂದು ಸೂಚಿಸಿದರು.
ಈ ವೇಳೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಾಕಿ ಇರುವ ಎಲ್ಲಾ ಹಳೆಯ ಅರಣ್ಯ ಅನುಮತಿ ಪ್ರಕರಣಗಳನ್ನು ಜುಲೈ 15ರೊಳಗೆ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಅರಣ್ಯವಾಸಿಗಳ ಹಕ್ಕುಗಳಿಗೆ ಆದ್ಯತೆ
ಅರಣ್ಯವಾಸಿಗಳ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಎಂದು ಮುಖ್ಯಮಂತ್ರಿ ಸೂಚಿಸಿದರು. ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟು ಅವರಿಗೆ ತೊಂದರೆ ನೀಡಬಾರದು. ನಿಯಮಾನುಸಾರ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆಗೆ ಒತ್ತು
ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಅಮೂಲ್ಯವಾಗಿದ್ದು, ಅದರ ಸಂರಕ್ಷಣೆ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಸಿಎಂ ಹೇಳಿದರು. ನೆಡುತೋಪು ನಿರ್ಮಾಣ ಹಾಗೂ ಸಾರ್ವಜನಿಕರಿಗೆ ಸಸಿ ವಿತರಣೆ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು, ಮಾನವ–ವನ್ಯಜೀವಿ ಸಂಘರ್ಷ ತಡೆ ಹಾಗೂ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ಕ್ರಮಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಮಾನವ–ವನ್ಯಜೀವಿ ಸಂಘರ್ಷ ತಡೆಗೆ ಹೊಸ ತಂತ್ರಜ್ಞಾನ
2025–26ನೇ ಸಾಲಿನಲ್ಲಿ ಬೆಳೆ ಹಾನಿ, ಜಾನುವಾರು ಸಾವು, ಮಾನವ ಜೀವಹಾನಿ, ಗಾಯ, ಅಂಗವೈಕಲ್ಯ ಹಾಗೂ ಆಸ್ತಿ ನಷ್ಟಕ್ಕೆ ಒಟ್ಟು ₹63.06 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮಾನವ–ಆನೆ ಸಂಘರ್ಷ ನಿಯಂತ್ರಣಕ್ಕಾಗಿ ರೈಲ್ವೆ ಬ್ಯಾರಿಕೇಡ್, ಆನೆ ತಡೆ ಕಂದಕ, ಸೌರ ತಂತಿ ಬೇಲಿ ನಿರ್ಮಾಣ, ಆನೆ ಹಾಗೂ ಚಿರತೆ ಕಾರ್ಯಪಡೆಗಳ ಕಾರ್ಯಾಚರಣೆ ಮತ್ತು ಎಸ್ಎಂಎಸ್ ಹಾಗೂ ಡಿಜಿಟಲ್ ಬೋರ್ಡ್ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪ್ರಾಣಿಗಳು ಕೂಡ ಹೊಸ ಮಾರ್ಗಗಳನ್ನು ಕಂಡುಕೊಂಡು ಅಡೆತಡೆಗಳನ್ನು ದಾಟುತ್ತವೆ. ಹೀಗಾಗಿ ಅಧಿಕಾರಿಗಳು ಸಹ ಹೊಸ ತಂತ್ರಜ್ಞಾನ ಮತ್ತು ಪರಿಣಾಮಕಾರಿ ವಿಧಾನಗಳ ಬಗ್ಗೆ ನಿರಂತರ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.
ಖಾಲಿ ಹುದ್ದೆಗಳ ಭರ್ತಿಗೂ ಸೂಚನೆ
ಇಲಾಖೆಯ ಆಡಳಿತ ವ್ಯವಸ್ಥೆ, ಪ್ರಮುಖ ಯೋಜನೆಗಳು ಹಾಗೂ ವಿವಿಧ ಹಂತಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಸಮಗ್ರ ಮಾಹಿತಿ ಪಡೆದ ಮುಖ್ಯಮಂತ್ರಿ, ಅಗತ್ಯ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ವನ್ಯಜೀವಿಗಳ ಮೇಲೆ ನಿಗಾ ಇಡಲು ಥರ್ಮಲ್ ಡ್ರೋನ್ಗಳ ಬಳಕೆ ಕುರಿತು ಸಹ ಚರ್ಚೆ ನಡೆಯಿತು.
ಇದೇ ವೇಳೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಗೋವಾ–ತಮನಾರ್, ಕಳಸಾ–ಬಂಡೂರಿ ಹಾಗೂ ಬಿಡಿಎ ಪೆರಿಫೆರಲ್ ರಿಂಗ್ ರಸ್ತೆ ಸೇರಿದಂತೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಬಾಕಿ ಇರುವ ಅರಣ್ಯ ಅನುಮತಿಗಳನ್ನು ತ್ವರಿತವಾಗಿ ಮಂಜೂರು ಮಾಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ರಿತೇಶ್ ಕುಮಾರ್ ಸಿಂಗ್, ಅಂಜುಮ್ ಪರ್ವೇಜ್, ಕರ್ನಾಟಕ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.