

ತೆಕ್ಕಲಕೋಟೆ, 29 ಜೂನ್ (ಹಿ.ಸ.) :
ಆ್ಯಂಕರ್ : ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ವಿವಿಧ ಇಲಾಖೆಗಳ ಜಂಟಿ ಆಶ್ರಯದಲ್ಲಿ ಸೋಮವಾರ ಹಠಾತ್ ದಾಳಿ ನಡೆಸಿ, ಇಬ್ಬರು ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಚೈಲ್ಡ್ಲೈನ್ ಸಹಯೋಗದೊಂದಿಗೆ ತೆಕ್ಕಲಕೋಟೆ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ನಡೆಸಲಾಯಿತು.
ನಂತರ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಗ್ಯಾರೇಜ್, ಹೋಟೆಲ್, ಬೇಕರಿ, ಕಿರಾಣಿ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ಸುಮಾರು 20 ಉದ್ದಿಮೆಗಳ ಮೇಲೆ ಅಧಿಕಾರಿಗಳ ತಂಡ ಜಂಟಿ ದಾಳಿ ನಡೆಸಿತು.
ಮರು ದಾಖಲಾತಿ ಮತ್ತು ಕಾನೂನು ಕ್ರಮ :
ದಾಳಿಯ ವೇಳೆ ಪತ್ತೆಯಾದ ಇಬ್ಬರು ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿ, ಕೆಲಸದಿಂದ ಬಿಡುಗಡೆಗೊಳಿಸಿದರು. ಬಳಿಕ ಆ ಮಕ್ಕಳನ್ನು ಅವರು ಈ ಹಿಂದೆ ವ್ಯಾಸಂಗ ಮಾಡುತ್ತಿದ್ದ ಶಾಲೆಗೇ ಮರು ದಾಖಲಿಸುವ ಮೂಲಕ ಶಿಕ್ಷಣದ ಮುಖ್ಯವಾಹಿನಿಗೆ ತರಲಾಯಿತು. ಸದ್ಯ ಮಕ್ಕಳ ವಯಸ್ಸಿನ ದಾಖಲಾತಿಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಕಾನೂನು ಉಲ್ಲಂಘಿಸಿದ ಅಂಗಡಿ ಮಾಲೀಕರ ವಿರುದ್ಧ ಸಂಬ0ಧಪಟ್ಟ ಪೊಲೀಸ್ ಠಾಣೆಯಲ್ಲಿ ಬಾಲಕಾರ್ಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ಜೊತೆಗೆ, ಪಟ್ಟಣದ ಅಂಗಡಿ ಮತ್ತು ಉದ್ದಿಮೆಗಳ ಮಾಲೀಕರಿಗೆ ಯಾವುದೇ ಕಾರಣಕ್ಕೂ ಬಾಲಕಾರ್ಮಿಕರನ್ನು ಹಾಗೂ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಲಾಯಿತು. ಈ ಕುರಿತು ಜಾಗೃತಿ ಪೋಸ್ಟರ್ಗಳನ್ನು ವಿತರಿಸುವ ಮೂಲಕ ಮಾಲೀಕರಲ್ಲಿ ಅರಿವು ಮೂಡಿಸಲಾಯಿತು.
ಈ ಟಾಸ್ಕ್ ಫೋರ್ಸ್ ಕಾರ್ಯಾಚರಣೆಯಲ್ಲಿ ಸಿರುಗುಪ್ಪ ಕಾರ್ಮಿಕ ನಿರೀಕ್ಷಕ ತಿರುಮಲೇಶ್, ತೆಕ್ಕಲಕೋಟೆ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಪರಶುರಾಮ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಸಿದ್ದಯ್ಯ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ. ಮೌನೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ರೆಡ್ಡಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾರಾಯಣ ಸ್ವಾಮಿ, ಕಂದಾಯ ನಿರೀಕ್ಷಕ ಎನ್.ವಿ. ಪ್ರಸನ್ನ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಹೇಮಾವತಿ, ಪಟ್ಟಣ ಪಂಚಾಯತಿ ಸಿಬ್ಬಂದಿ ಸುಮಲತಾ, ಮಕ್ಕಳ ಸಹಾಯವಾಣಿ (ಚೈಲ್ಡ್ಲೈನ್) ಸಿಬ್ಬಂದಿ ಕಾರ್ತಿಕ್, ಪ್ಯಾರಾ ಲೀಗಲ್ ವಾಲೆಂಟಿಯರ್ ಲಕ್ಷಿö್ಮ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್