
ಗದಗ, 29 ಜೂನ್ (ಹಿ.ಸ.) :
ಆ್ಯಂಕರ್ : ಪ್ರತಿದಿನ ನಿಗದಿತ ಸಮಯಕ್ಕೆ ಬಸ್ ಸಂಚರಿಸದ ಹಿನ್ನೆಲೆಯಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದಿದೆ.
ಲಕ್ಷ್ಮೇಶ್ವರ ಪಟ್ಟಣದಿಂದ ಕುಂದ್ರಳ್ಳಿ ತಾಂಡಾಕ್ಕೆ ಪ್ರತಿದಿನ ಸಂಜೆ 4.30ಕ್ಕೆ ಹೊರಡಬೇಕಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕಳೆದ ಒಂದು ವಾರದಿಂದ ನಿರಂತರವಾಗಿ ವಿಳಂಬವಾಗಿ ಸಂಚರಿಸುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.
ಸೋಮವಾರವೂ ಸಂಜೆ 5.30 ಕಳೆದರೂ ಬಸ್ ಹೊರಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಬಸ್ ನಿಲ್ದಾಣದಲ್ಲೇ ಪ್ರತಿಭಟನೆಗೆ ಮುಂದಾದರು.
ಸುರಿಯುತ್ತಿದ್ದ ಮಳೆಯ ನಡುವೆಯೇ ತಮ್ಮ ಶಾಲಾ ಹಾಗೂ ಕಾಲೇಜಿನ ಪುಸ್ತಕದ ಬ್ಯಾಗ್ಗಳನ್ನು ರಸ್ತೆಯ ಮೇಲೆ ಇಟ್ಟು ಬಸ್ ಮುಂದೆ ನಿಂತ ವಿದ್ಯಾರ್ಥಿನಿಯರು, ಸಮಯಕ್ಕೆ ಸರಿಯಾಗಿ ಬಸ್ ಬಿಡುವಂತೆ ಒತ್ತಾಯಿಸಿದರು.
ಪ್ರತಿದಿನ ತಡವಾಗಿ ಮನೆ ತಲುಪುವುದರಿಂದ ಓದಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದಲೂ ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಅಗತ್ಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಒಂದು ವಾರದಿಂದ ಇದೇ ಸಮಸ್ಯೆ ಮುಂದುವರಿದಿದ್ದರೂ ಸಾರಿಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಯದ ಕಾರಣ ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಯಿತು ಎಂದು ವಿದ್ಯಾರ್ಥಿನಿಯರು ತಿಳಿಸಿದರು.
ವಿದ್ಯಾರ್ಥಿನಿಯರ ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಕ್ರೈಂ ಪಿಎಸ್ಐ ಟಿ.ಕೆ. ರಾಠೋಡ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪ್ರತಿಭಟನಾನಿರತ ವಿದ್ಯಾರ್ಥಿನಿಯರೊಂದಿಗೆ ಮಾತುಕತೆ ನಡೆಸಿದ ಅವರು, ಸಾರಿಗೆ ಘಟಕದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಇನ್ನು ಮುಂದೆ ನಿಗದಿತ ಸಮಯಕ್ಕೆ ಬಸ್ ಸಂಚರಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಂದ ಭರವಸೆ ದೊರೆತ ಬಳಿಕ ವಿದ್ಯಾರ್ಥಿನಿಯರು ಪ್ರತಿಭಟನೆ ಹಿಂಪಡೆದರು. ನಂತರ ಬಸ್ ಅನ್ನು ಕುಂದ್ರಳ್ಳಿ ತಾಂಡಾ ಮಾರ್ಗಕ್ಕೆ ಬಿಡಲಾಯಿತು.
ಈ ಘಟನೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿನಿತ್ಯ ಎದುರಿಸುತ್ತಿರುವ ಸಾರಿಗೆ ಸಮಸ್ಯೆಯನ್ನು ಮತ್ತೊಮ್ಮೆ ಬಯಲಿಗೆಳೆದಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಿ ನಿಗದಿತ ವೇಳಾಪಟ್ಟಿಯಂತೆ ಬಸ್ ಸಂಚಾರ ನಡೆಸಬೇಕು ಎಂದು ಸಾರ್ವಜನಿಕರು ಹಾಗೂ ಪಾಲಕರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP