ಬೆಂಗಳೂರು ರಸ್ತೆ ಗುಂಡಿಗಳ ಕುರಿತು ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು, 29 ಜೂನ್ (ಹಿ.ಸ.) : ಆ್ಯಂಕರ್ : ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಕುರಿತು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ
ಅಶೋಕ


ಬೆಂಗಳೂರು, 29 ಜೂನ್ (ಹಿ.ಸ.) :

ಆ್ಯಂಕರ್ : ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಕುರಿತು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಸ್ತೆ ಗುಂಡಿಗಳ ಸಮಸ್ಯೆ ಪರಿಹರಿಸುವ ಬದಲು ರೀಲ್ಸ್ ಮಾಡುವುದರಲ್ಲಿ ಸರ್ಕಾರ ನಿರತವಾಗಿದೆ ಎಂದು ಟೀಕಿಸಿದ್ದಾರೆ.

ನಗರದ ವಿನಾಯಕ ಲೇಔಟ್, ನಾಗರಭಾವಿ, ಮುದ್ದಿನಪಾಳ್ಯ ರಸ್ತೆ, ಜಯನಗರ 8ನೇ ಬ್ಲಾಕ್ ಸೇರಿದಂತೆ ಬೆಂಗಳೂರಿನ ವಿವಿಧ ಭಾಗಗಳ ರಸ್ತೆ ಗುಂಡಿಗಳ ಚಿತ್ರಗಳನ್ನು ಉಲ್ಲೇಖಿಸಿದ ಅಶೋಕ್, ರಾಜಧಾನಿಯ ಬಹುತೇಕ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರ್ ನಡೆಯುತ್ತಿದೆ. ಈ ದುಸ್ಥಿತಿಯನ್ನು ಸಚಿವರು ಒಮ್ಮೆ ಕಣ್ಣಾರೆ ನೋಡಲಿ ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಉಲ್ಲೇಖಿಸಿದ ಅವರು, ಬೆಂಗಳೂರಿನ ಇಂದಿನ ಸ್ಥಿತಿಗೆ ಮುಖ್ಯಮಂತ್ರಿ ನೇರ ಹೊಣೆಗಾರರು ಎಂದು ಆರೋಪಿಸಿದ್ದಾರೆ. ಬೆಂಗಳೂರು 'ಫೇಲ್ಡ್ ಮಾಡೆಲ್' ಎಂಬ ವಾಸ್ತವವನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಸುರಕ್ಷಿತ ರಸ್ತೆ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅಶೋಕ್, ಜನರಿಂದ ತೆರಿಗೆ ಸಂಗ್ರಹಿಸುವ ಸರ್ಕಾರಕ್ಕೆ ಉತ್ತಮ ರಸ್ತೆ ಒದಗಿಸುವ ಯೋಗ್ಯತೆಯಿಲ್ಲ. ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.

ಅಧಿಕಾರಿಗಳನ್ನು ಕ್ಯಾಮೆರಾ ಮುಂದೆ ಗದರಿಸುವುದಕ್ಕಿಂತ ಮೊದಲು ರಸ್ತೆಗಿಳಿದು ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ ಅವರು, ಸಮಸ್ಯೆ ಮುಂದುವರಿದರೆ ಬೆಂಗಳೂರಿನ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande