
ಚಿತ್ರದುರ್ಗ, 29 ಜೂನ್ (ಹಿ.ಸ.):
ಆ್ಯಂಕರ್:
ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣು ಮತ್ತು ಆರೋಗ್ಯಕರ ಪರಿಸರ ಉಳಿಸಿಕೊಡಲು ರೈತರು ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನಿಕಾಂತ ತಿಳಿಸಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ರಾಜ್ಯ ವಲಯ ಕೃಷಿ ಆಯುಕ್ತಾಲಯ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಆಸಕ್ತ ರೈತರಿಗಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರೈತರಿಗೆ ಉತ್ತಮ ಪರಿಸರ ಮತ್ತು ಆರೋಗ್ಯಕ್ಕಾಗಿ ಔಷಧಿಯ ಸಸ್ಯಗಳು, ಸಾವಯವ ಕೃಷಿ ಹಾಗೂ ಜೇನು ಕೃಷಿಯ ಕುರಿತು ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ಉಚಿತ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತ ಬಾಂಧವರು ತಮ್ಮ ಕ್ಷೇತ್ರದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಕೃಷಿಯಲ್ಲಿ ತೊಡಗಿಸಿಕೊಂಡರೆ ಸುಸ್ಥಿರ ಇಳುವರಿ ಪಡೆಯಲು ಸಾಧ್ಯ ಎಂದರು.
ತರಬೇತಿಯ ಮೊದಲನೇ ದಿನ ಚಿತ್ರದುರ್ಗ ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಜಿ.ಬಿ.ನಾರದಮುನಿ ಅವರು, ವಾಣಿಜ್ಯ ಬೆಳೆಯಾಗಿ ಔಷಧೀಯ ಸಸ್ಯಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ವಿವರಿಸಿದ್ದಲ್ಲದೆ, ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ವಿಷಯಗಳ ಕುರಿತು ಮಾಹಿತಿ ನೀಡಿದರು.
ನಂತರ ಬ್ಯಾಡರಹಳ್ಳಿ ಗ್ರಾಮದ ಪ್ರಗತಿಪರ ಸಾವಯವ ಕೃಷಿಕ ಇಂದೂಧರ ಅವರು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿರುವ ಸಾವಯವ ಕೃಷಿ ಪದ್ಧತಿಗಳು, ನೀರು, ಫೋಷಕಾಂಶ ಹಾಗೂ ರೋಗ ಮತ್ತು ಕೀಟ ನಿರ್ವಹಣಾ ಕ್ರಮಗಳನ್ನು
ಎರಡನೇ ದಿನ ಮೇಟಿಕುರ್ಕೆಯ ಪ್ರಗತಿಪರ ಜೇನು ಕೃಷಿಕ ಶಾಂತವೀರಯ್ಯ ಅವರು ಪರಿಸರದಲ್ಲಿ ಜೀವ ವೈವಿಧ್ಯತೆ ಕಾಪಾಡಲು ಹಾಗೂ ವಿವಿಧ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಲು ರೈತರು ತಮ್ಮ ತಾಕಿನಲ್ಲಿ ಜೇನು ಕೃಷಿ ಕೈಗೊಳ್ಳುವಂತೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಮದಕರಿಪುರದ ನೋರಾ ಅಗ್ರೋಟೆಕ್ನ ಕುಮಾರ್ ಎಂ.ಡಿ ಅವರು ವಿವಿಧ ಔಷಧೀಯ ಸಸ್ಯಗಳ ಒಪ್ಪಂದ ಕೃಷಿ, ಮಾರುಕಟ್ಟೆ ಮತ್ತು ಸಂಸ್ಕರಣೆ ಕುರಿತು ಮಾಹಿತಿ ನೀಡಿದರೆ, ಮೆಹಬೂಬ್ ಅವರು ಮಣ್ಣಿನ ಫಲವತ್ತತೆ ಮತ್ತು ಕಳೆ ನಿಯಂತ್ರಣಕ್ಕಾಗಿ ತೋಟಗಳಲ್ಲಿ ‘ವೆಲ್ವೆಟ್ ಬೀನ್ಸ್' ಅನ್ನು ಹಸಿರೆಲೆ ಗೊಬ್ಬರವಾಗಿ ಬೆಳೆಯುವಂತೆ ಹಾಗೂ ಅದರ ಬೀಜ ಮಾರಾಟದಿಂದ ಲಾಭ ಗಳಿಸುವ ವಿಧಾನ ತಿಳಿಸಿಕೊಟ್ಟರು.
ಮೂರನೇ ದಿನ ರೈತರು ಪ್ರಗತಿಪರ ಕೃಷಿಕ ಇಂದೂಧರ ಅವರ ಸಾವಯವ ಕೃಷಿ ತಾಕಿಗೆ ಭೇಟಿ ನೀಡಿ ಕಂದಕ ಬದು, ಭೂಮಿಯ ಮುಚ್ಚಿಗೆ, ಜೀವಾಮೃತ, ಅಮೃತಜಲ ಮತ್ತು ಎರೆಹುಳ ಗೊಬ್ಬರ ತಯಾರಿಕೆಯ ಕುರಿತು ಪ್ರತ್ಯಕ್ಷ ಮಾಹಿತಿ ಪಡೆದರು. ಬಳಿಕ ಬಿಜಿಕೆರೆಯ ಡಾ. ವೀರಭದ್ರಪ್ಪ ಅವರ ‘ವಸುಂದರ ಫಾರಂ'ಗೆ ಅಧ್ಯಯನ ಪ್ರವಾಸ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಡಾ. ವೀರಭದ್ರಪ್ಪ, ‘ರೈತರು ಕೇವಲ ಏಕಬಳೆ ಪದ್ಧತಿಯನ್ನು ನಂಬಿ ಕೂರದೆ, ವೈಜ್ಞಾನಿಕ ತಾಂತ್ರಿಕ ಮಾಹಿತಿ ಪಡೆದು ತಮ್ಮ ಪರಿಸರಕ್ಕೆ ತಕ್ಕಂತೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಆರ್ಥಿಕವಾಗಿ ಲಾಭ ಗಳಿಸಬಹುದು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.