
ಚಿತ್ರದುರ್ಗ, 29 ಜೂನ್ (ಹಿ.ಸ.) :
ಆ್ಯಂಕರ್ : ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಸುದೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಹಿರಿಯ ತಾಂತ್ರಿಕ ತಜ್ಞ ಎನ್.ಪಿ. ಶಿವಮೂರ್ತಿ ಅವರಿಗೆ ಆಕಾಶವಾಣಿ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ಬಿಳ್ಕೊಡುಗೆ ನೀಡಲಾಯಿತು.
ಈ ವೇಳೆ ಮಾತನಾಡಿದ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಹಣಾಧಿಕಾರಿ ಶಿವಪ್ರಕಾಶ್, ಒಂದು ಸಂಸ್ಥೆಯ ಯಶಸ್ಸಿನ ಹಿಂದೆ ತಾಂತ್ರಿಕ ವಿಭಾಗದ ಪಾತ್ರ ದೊಡ್ಡದಾಗಿರುತ್ತದೆ. ಎನ್.ಪಿ. ಶಿವಮೂರ್ತಿ ಅವರು ತಮ್ಮ ಸೇವಾವಧಿಯಲ್ಲಿ ಅತ್ಯಂತ ನಿಷ್ಠೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಾರೆ.
ಕಾರ್ಯಕ್ರಮಗಳು ಯಾವುದೇ ಅಡಚಣೆಯಿಲ್ಲದೆ ಕೇಳುಗರ ತಲುಪುವಲ್ಲಿ ಅವರ ತಾಂತ್ರಿಕ ನೈಪುಣ್ಯತೆ ಮತ್ತು ಶ್ರಮ ಅಪಾರವಾದದು ಎಂದು ಶ್ಘಾಘಿಸಿದರು.
ಕೆ.ಎಸ್.ಎಫ್.ಸಿ ನಿವೃತ್ತ ಸಹಾಯಕ ನಿರ್ದೇಶಕ ಆರ್. ಬಾಬು ಮಾತನಾಡಿ, ಶಿವಮೂರ್ತಿ ಅವರ ಸುದೀರ್ಘ ಹಾಗೂ ಕರ್ತವ್ಯನಿಷ್ಠ ಸೇವೆ ಶ್ಲಾಘಿಸಿ, ತಾಂತ್ರಿಕ ವಿಭಾಗದಲ್ಲಿ ಎದುರಾಗುತ್ತಿದ್ದ ಸವಾಲುಗಳನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸುತ್ತಾ, ಸಂಸ್ಥೆಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಅಪಾರ ಎಂದು ನೆನೆದರು.
ಸಾಹಿತಿ ಹೆಚ್. ಆನಂದ್ ಕುಮಾರ್ ಮಾತನಾಡಿ, ವಯೋನಿವೃತ್ತಿ ಎಂಬುದು ಪ್ರತಿಯೊಬ್ಬ ಸರ್ಕಾರಿ ನೌಕರನ ಜೀವನದಲ್ಲೂ ಎದುರಾಗುವ ಅನಿವಾರ್ಯ ಘಟ್ಟ. ಇದೊಂದು ತೆರೆದಿಟ್ಟ ಪುಸ್ತಕವಿದ್ದಂತೆ. ನೌಕರಿಯ ನಂತರದ ಜೀವನವು ಮತ್ತೊಂದು ಹೊಸ ಬಾಳಿಗೆ ಸಾಕ್ಷಿ ಎಂದರು.
ಮೂಲತಃ ಚಿತ್ರದುರ್ಗದ ಕುರುಬರಹಟ್ಟಿಯವರಾದ ಶಿವಮೂರ್ತಿ ಅವರು ಐಟಿಐ ಮುಗಿಸಿ, ಮೊದಲು ಮಿಲಿಟರಿ ಇಂಜಿನಿಯರಿಂಗ್ ಸರ್ವಿಸ್ನಲ್ಲಿ ಕಾರ್ಯನಿರ್ವಹಿಸಿದರು. ನಂತರ 1989ರಲ್ಲಿ ದೂರದರ್ಶನ ಕೇಂದ್ರ ಸೇರಿದರು. ಅಲ್ಲಿಂದ 2010ರಲ್ಲಿ ಬೆಂಗಳೂರು ಆಕಾಶವಾಣಿಗೆ ಹಾಗೂ 2023ರಲ್ಲಿ ಚಿತ್ರದುರ್ಗ ಆಕಾಶವಾಣಿ ಕೇಂದ್ರಕ್ಕೆ ವರ್ಗಾವಣೆಗೊಂಡು, ಇದೀಗ ವಯೋನಿವೃತ್ತಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದುರ್ಗ ಆಕಾಶವಾಣಿ ಕೇಂದ್ರದ ನಿವೃತ್ತ ಅಸಿಸ್ಟೆಂಟ್ ಡೈರೆಕ್ಟ ಇಂಜಿನಿಯರ್ ಕೆ.ಕೆ.ಮಣಿ, ಭದ್ರಾವತಿ ಆಕಾಶವಾಣಿ ಕೇಂದ್ರದ ಅಸಿಸ್ಟೆಂಟ್ ಡೈರೆಕ್ಟ್ ಇಂಜಿನಿಯರ್ ಕೃಷ್ಣಪ್ಪ ಸೇರಿದಂತೆ ಮತ್ತಿತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.