
ಗದಗ, 29 ಜೂನ್ (ಹಿ.ಸ.) :
ಆ್ಯಂಕರ್ : ರಾಮ ಮಂದಿರದ ವಿಚಾರದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳನ್ನು ಬಿಜೆಪಿ ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ತೀವ್ರವಾಗಿ ಖಂಡಿಸಿದ್ದಾರೆ.
ರಾಮ ಮಂದಿರ ನಿರ್ಮಾಣವು ದೇಶದ ಕೋಟ್ಯಂತರ ಹಿಂದೂಗಳ ಹಲವು ದಶಕಗಳ ಕನಸಾಗಿದ್ದು, ಅದನ್ನು ನನಸುಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಮ ಮಂದಿರ ನಿರ್ಮಾಣಕ್ಕಾಗಿ ಅನೇಕ ವರ್ಷಗಳಿಂದ ಸಂತರು, ಸಂಘಟನೆಗಳು ಹಾಗೂ ಹಿಂದೂ ಸಮಾಜ ನಿರಂತರ ಹೋರಾಟ ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಆ ಕನಸು ನನಸಾಗಿದ್ದು, ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಇದನ್ನು ಇಡೀ ದೇಶದ ಹಿಂದೂ ಸಮಾಜ ಹೆಮ್ಮೆಯಿಂದ ಸ್ವಾಗತಿಸಿದೆ ಎಂದು ತಿಳಿಸಿದ್ದಾರೆ.
ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಕೆಲವರು ಮಾಡಿದ ತಪ್ಪುಗಳನ್ನು ಇಡೀ ಬಿಜೆಪಿ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹೊರಿಸುವುದು ಸರಿಯಲ್ಲ. ಯಾರಾದರೂ ವ್ಯಕ್ತಿಗಳ ವೈಯಕ್ತಿಕ ತಪ್ಪಿಗೆ ಬಿಜೆಪಿಯನ್ನು ಹೊಣೆ ಮಾಡುವುದು ನ್ಯಾಯಸಮ್ಮತವಲ್ಲ. ಇಂತಹ ಆರೋಪಗಳನ್ನು ದೇಶದ ನಿಜವಾದ ಪ್ರಜೆಗಳು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಪ್ರಕರಣದ ಕುರಿತು ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ತನಿಖೆ ಪೂರ್ಣಗೊಳ್ಳುವ ಮುನ್ನವೇ ರಾಜಕೀಯ ಲಾಭಕ್ಕಾಗಿ ಬಿಜೆಪಿ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಸುರೇಶ ಮರಳಪ್ಪನವರ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಕುರಿತು ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಅನೇಕ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ವಿಧಾನಸಭೆಯಲ್ಲಿಯೂ ಬಿಜೆಪಿ ಶಾಸಕರು ಈ ಕುರಿತು ಪ್ರಶ್ನೆ ಎತ್ತಿದರೂ ಸರ್ಕಾರ ಸಮರ್ಪಕ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.
ಸಿಎಜಿ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 19,020 ಫಲಾನುಭವಿಗಳ ಹೆಸರಿನಲ್ಲಿ ಒಂದೇ ಜಂಟಿ ಖಾತೆಗೆ ಸುಮಾರು ₹60.69 ಕೋಟಿ ಜಮೆಯಾಗಿರುವ ವಿಷಯ ಬಹಿರಂಗವಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕುರಿತು ಕಾಂಗ್ರೆಸ್ ನಾಯಕರು ಹಾಗೂ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಗದಗ-ಬೆಟಗೇರಿ ಅವಳಿ ನಗರದ ಅಭಿವೃದ್ಧಿ ವಿಚಾರದಲ್ಲಿಯೂ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ ಅವರು, ಹಲವು ದಶಕಗಳಿಂದ ಅಧಿಕಾರದಲ್ಲಿದ್ದರೂ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ನಗರದಲ್ಲಿ ರಸ್ತೆ, ಚರಂಡಿ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯೂ ಅಪೂರ್ಣವಾಗಿದ್ದು, ಈ ಸಮಸ್ಯೆಗಳ ಕುರಿತು ಕಾಂಗ್ರೆಸ್ ನಾಯಕರು ಮಾತನಾಡಬೇಕು ಎಂದು ಹೇಳಿದರು.
ಗದಗ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಆಗದಿರುವುದು, ಬಡವರು ಹಾಗೂ ಶ್ರಮಿಕರಿಗೆ ಉದ್ಯೋಗದ ಅವಕಾಶಗಳ ಕೊರತೆ, ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆ ವಿಳಂಬವಾಗಿರುವುದು ಹಾಗೂ ವೃದ್ಧಾಪ್ಯ ವೇತನಕ್ಕಾಗಿ ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ರಾಮ ಮಂದಿರದ ವಿಷಯವನ್ನು ರಾಜಕೀಯವಾಗಿ ಬಳಸುವ ಬದಲು ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತು ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ನೈಜ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಆದ್ಯತೆ ನೀಡಬೇಕೆಂದು ಸುರೇಶ ಮರಳಪ್ಪನವರ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP