
ಗದಗ, 29 ಜೂನ್ (ಹಿ.ಸ.) :
ಆ್ಯಂಕರ್ : ಗಂಡ-ಹೆಂಡತಿ ನಡುವಿನ ಕೌಟುಂಬಿಕ ಕಲಹವು ಕುಡಿದ ಮತ್ತಿನಲ್ಲಿ ಯುವಕನೊಬ್ಬ ಮೊಬೈಲ್ ಟಾವರ್ ಏರಿ ಆತಂಕ ಸೃಷ್ಟಿಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮುಂಡರಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಯಿತು.
ಕೋರ್ಲಹಳ್ಳಿ ಗ್ರಾಮದ ನಿವಾಸಿ ನಜೀರ್ ಸಾಬ್ ಎಂಬಾತ ಗಂಡ-ಹೆಂಡತಿ ನಡುವಿನ ವೈಮನಸ್ಸಿನ ಹಿನ್ನೆಲೆಯಲ್ಲಿ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ. ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಪತ್ನಿ ತವರು ಮನೆಗೆ ತೆರಳಿದ್ದಳು. ಇದರಿಂದ ಮನನೊಂದಿದ್ದ ನಜೀರ್ ಸಾಬ್ ಸೋಮವಾರ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ಈ ವೇಳೆ ಮನೆಯವರು ಕುಡಿದು ಬಂದಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮನೆಯವರ ಮಾತಿನಿಂದ ಮತ್ತಷ್ಟು ಆಕ್ರೋಶಗೊಂಡ ನಜೀರ್ ಸಾಬ್ ನೇರವಾಗಿ ಗ್ರಾಮದ ಮೊಬೈಲ್ ಟಾವರ್ ಏರಿ ಕುಳಿತು ಕೆಲಕಾಲ ಹೈಡ್ರಾಮಾ ನಡೆಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸಿದ್ದು, ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸಬಹುದೆಂಬ ಆತಂಕ ಆವರಿಸಿತ್ತು.
ಮಾಹಿತಿ ಪಡೆದ ಮುಂಡರಗಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಟಾವರ್ ಮೇಲಿದ್ದ ನಜೀರ್ ಸಾಬ್ ಅವರನ್ನು ಕೆಳಗಿಳಿಯುವಂತೆ ಪೊಲೀಸರು ಹಾಗೂ ಸಿಬ್ಬಂದಿ ಸಾಕಷ್ಟು ಸಮಯ ಮನವೊಲಿಸಿದರು. ಗ್ರಾಮಸ್ಥರು ಮತ್ತು ಕುಟುಂಬದ ಸದಸ್ಯರೂ ಸಹ ಮನವೊಲಿಸಲು ಪ್ರಯತ್ನಿಸಿದರು.
ದೀರ್ಘಕಾಲದ ಮನವೊಲಿಕೆ ಬಳಿಕ ನಜೀರ್ ಸಾಬ್ ಟಾವರ್ನಿಂದ ಕೆಳಗಿಳಿದರೂ, ಕೆಲಕಾಲ ಪೊಲೀಸರೊಂದಿಗೆ ಮುಚ್ಚಾಟ ಮೆರೆದಿದ್ದಾನೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಘಟನೆ ಕೋರ್ಲಹಳ್ಳಿ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಿಸಿತ್ತು. ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಸ್ಥಳಕ್ಕೆ ಜಮಾಯಿಸಿದ್ದರಿಂದ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಆದರೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಮಯೋಚಿತವಾಗಿ ಕಾರ್ಯನಿರ್ವಹಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸದೇ ಪರಿಸ್ಥಿತಿ ಸುಧಾರಿಸಿತು.
ಕೌಟುಂಬಿಕ ಸಮಸ್ಯೆಗಳು ಅಥವಾ ಮಾನಸಿಕ ಒತ್ತಡದ ಸಂದರ್ಭಗಳಲ್ಲಿ ಇಂತಹ ಅಪಾಯಕಾರಿ ನಿರ್ಧಾರಗಳನ್ನು ಕೈಗೊಳ್ಳಬಾರದು. ಸಮಸ್ಯೆಗಳನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳುವುದು ಹಾಗೂ ಅಗತ್ಯವಿದ್ದಲ್ಲಿ ಕುಟುಂಬಸ್ಥರು ಅಥವಾ ಸಂಬಂಧಿತ ಅಧಿಕಾರಿಗಳ ನೆರವು ಪಡೆಯುವುದು ಸೂಕ್ತ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / lalita MP