
ಕೋಲಾರ, ೨೯ (ಹಿ.ಸ) :
ಆ್ಯಂಕರ್ : ಆಂದ್ರ ಪ್ರದೇಶದ ಚಿತ್ತೂರು ಜಿಲ್ಲೆ ವೆಂಕಟಗಿರಿಕೋಟಯ ಭಾರತ್ ನಗರದ ಸಪ್ತಸ್ವರ ಸಂಗೀತ ಪಾಠ ಶಾಲೆ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾನಪದ ಸಂಗೀತ ವೈಭವ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಮೂಡಿಬಂದಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸಮಾಜ ಸೇವಕರು ಹಾಗೂ ಯುವ ಮುಖಂಡರಾದ ಶ್ರೀನಿವಾಸರೆಡ್ಡಿ ಅವರು, ಗಡಿನಾಡಿನಲ್ಲಿ ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಜಾನಪದ ಸಂಗೀತ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಪ್ತಸ್ವರ ಸಂಗೀತ ಪಾಠ ಶಾಲೆಯು ಇಂತಹ ಉನ್ನತ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡಲ ಅಧಿಕಾರಿಯಾದ ನಾರಾಯಣಪ್ಪ ಮಾತನಾಡಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವೆಂಕಟಗಿರಿಕೋಟೆಯಲ್ಲಿ ನೆಲೆಸಿರುವ ನೂರಾರು ಕನ್ನಡಿಗರಿಗೆ ಸಾಂಸ್ಕೃತಿಕ ಪ್ರಾತಿನಿಧ್ಯ ಒದಗಿಸುವುದು ನಮ್ಮ ಹೆಮ್ಮೆ. ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಬರುವಂತಹ ಕಲಾವಿದರಿಗೆ ನಮ್ಮ ಸಂಸ್ಥೆಯ ವತಿಯಿಂದ ಸೂಕ್ತ ವಸತಿ, ವೇದಿಕೆ ಹಾಗೂ ಊಟದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಿಕೊಡಲಾಗುವುದು. ಅಷ್ಟೇ ಅಲ್ಲದೆ, ಗಡಿನಾಡಿಗೆ ಭೇಟಿ ನೀಡುವ ಪ್ರತಿಯೊಬ್ಬ ಕಲಾವಿದರಿಗೂ ನಮ್ಮ ಸಂಸ್ಥೆಯಿ0ದ ಅತ್ಯಂತ ಗೌರವಪೂರ್ವಕ ಸನ್ಮಾನವನ್ನು ನೀಡಿ ಗೌರವಿಸಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕದ ಕೋಲಾರ ಜಿಲ್ಲೆಯಿಂದ ಆಗಮಿಸಿದ್ದ ಶ್ರೀನಿಧಿ ಮತ್ತು ತಂಡದವರ ಸುಗಮ ಸಂಗೀತ ಕಾರ್ಯಕ್ರಮವು ವೆಂಕಟಗಿರಿಕೋಟೆಯಲ್ಲಿ ನೆರೆದಿದ್ದ ನೂರಾರು ಕನ್ನಡಿಗರ ಮನಸೂರೆಗೊಂಡು ಮನೋಲ್ಲಾಸ ತುಂಬಿತು. ತಬಲ ವಾದಕರಾಗಿ ಚಿನ್ನು ಕೋಲಾರ, ಕೀಬೋರ್ಡ್ನಲ್ಲಿ ಬಂಗಾರಪೇಟೆಯ ಮಹೇಶ್ ಹಾಗೂ ರಿದಂ ಪ್ಯಾಡ್ನಲ್ಲಿ ಅರುಣ್ ನೆರ್ನಹಳ್ಳಿ ಸಾಥ್ ನೀಡಿದರು.
ಈ ಭವ್ಯ ಸಾಂಸ್ಕೃತಿಕ ಸಂಜೆಯಲ್ಲಿ ಮುಖ್ಯ ಅತಿಥಿಗಳಾಗಿ ಬೈರಕೂರಿನ ಸಾಹಿತಿ ಶ್ರೀ ವರದರಾಜು, ಅರಿವು ಪತ್ರಿಕೆಯ ರಾಮಮೂರ್ತಿ ನಾಯ್ಡು, ಕೋಲಾರದ ಜಾನಪದ ಗಾಯಕ ಸುನಿಲ್ ಕುಮಾರ್, ನೃತ್ಯ ಕಲಾವಿದೆ ಶ್ರೀಮತಿ ಮೇಘನಾ, ಸಮಾಜ ಸೇವಕ ಶ್ರೀ ಪ್ರಭಾಕರ್, ಹಿರಿಯ ಕಲಾವಿದ ಶ್ರೀ ರೆಡ್ಡೆಪ್ಪ ಹಾಗೂ ಬೈರಕೂರಿನ ಶ್ರೀ ಇಲಾಯಸ್ ಪಾಲ್ಗೊಂಡು ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು.
ಸಪ್ತಸ್ವರ ಸಂಗೀತ ಪಾಠ ಶಾಲೆಯ ಅಧ್ಯಕ್ಷರಾದ ನಾರಾಯಣಸ್ವಾಮಿ ಹಾಗೂ ಕಾರ್ಯದರ್ಶಿ ಪದ್ಮಾವತಿ ಅವರು ಆಗಮಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಮರ್ಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್