ಮಕ್ಕಳಿದ್ದೂ ಅನಾಥವಾದ ವೃದ್ಧ ದಂಪತಿ, ಸಹಾಯ ಮಾಡುವಂತೆ ಆಗ್ರಹ
ಗದಗ, 29 ಜೂನ್ (ಹಿ.ಸ.) : ಆ್ಯಂಕರ್ : ವಯಸ್ಸಾದ ನಂತರ ನೆಮ್ಮದಿಯ ಜೀವನ ನಡೆಸಬೇಕಾದ ಸಮಯದಲ್ಲಿ, ಕುಟುಂಬದ ಐದು ಸದಸ್ಯರ ಹೊಟ್ಟೆ ತುಂಬಿಸಲು ಪ್ರತಿನಿತ್ಯ ನಾಲ್ಕರಿಂದ ಐದು ಕ್ವಿಂಟಲ್ ಭಾರದ ಕೈಗಾಡಿಯನ್ನು ಎಳೆಯುತ್ತಿರುವ 75 ವರ್ಷದ ಹಿರಿಯ ಶ್ರಮಜೀವಿಯ ಬದುಕು ಗದಗ ಜಿಲ್ಲೆಯಲ್ಲಿ ಕಣ್ಣೀರು ತರಿಸುವಂತಿದೆ.
ಫೋಟೋ


ಗದಗ, 29 ಜೂನ್ (ಹಿ.ಸ.) :

ಆ್ಯಂಕರ್ : ವಯಸ್ಸಾದ ನಂತರ ನೆಮ್ಮದಿಯ ಜೀವನ ನಡೆಸಬೇಕಾದ ಸಮಯದಲ್ಲಿ, ಕುಟುಂಬದ ಐದು ಸದಸ್ಯರ ಹೊಟ್ಟೆ ತುಂಬಿಸಲು ಪ್ರತಿನಿತ್ಯ ನಾಲ್ಕರಿಂದ ಐದು ಕ್ವಿಂಟಲ್ ಭಾರದ ಕೈಗಾಡಿಯನ್ನು ಎಳೆಯುತ್ತಿರುವ 75 ವರ್ಷದ ಹಿರಿಯ ಶ್ರಮಜೀವಿಯ ಬದುಕು ಗದಗ ಜಿಲ್ಲೆಯಲ್ಲಿ ಕಣ್ಣೀರು ತರಿಸುವಂತಿದೆ.

ಮಕ್ಕಳಿದ್ದರೂ ಅನಾಥರಂತೆ ಜೀವನ ಸಾಗಿಸುತ್ತಿರುವ ರಾಜೀವ್ ಗಾಂಧಿನಗರ ನಿವಾಸಿ ಮಹಾಂತೇಶ್ ಪರಪ್ಪ ಕೋಳಿವಾಡ ಅವರ ಕುಟುಂಬವನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾಸಿಕ ₹10 ಸಾವಿರ ವಿಶೇಷ ಗೌರವಧನ ಹಾಗೂ ಉಚಿತ ಮನೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಹಾಗೂ ಹಿರಿಯ ಸಮಾಜಸೇವಕ ಹೀರಾಲಾಲ ಸಿಂಗ್ರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಗದಗ ನಗರದ ರಾಜೀವ್ ಗಾಂಧಿನಗರದಲ್ಲಿ ವಾಸವಾಗಿರುವ ಮಹಾಂತೇಶ್ ಪರಪ್ಪ ಕೋಳಿವಾಡ ಅವರಿಗೆ ಈಗ 75 ವರ್ಷ ವಯಸ್ಸು. ಈ ಇಳಿವಯಸ್ಸಿನಲ್ಲಿಯೂ ಅವರು ದಿನನಿತ್ಯ ಬಿಸಿಲು, ಮಳೆ, ಚಳಿ ಎನ್ನದೆ ರಸ್ತೆಗಳಲ್ಲಿ ಕೈಗಾಡಿ ಎಳೆದು ದುಡಿದು ಕುಟುಂಬವನ್ನು ಸಾಗಿಸುತ್ತಿದ್ದಾರೆ. ದೈಹಿಕವಾಗಿ ದುರ್ಬಲರಾಗಿದ್ದರೂ, ಕಣ್ಣು ಸರಿಯಾಗಿ ಕಾಣದ ಸ್ಥಿತಿಯಲ್ಲಿದ್ದರೂ ಜೀವನೋಪಾಯಕ್ಕಾಗಿ ಭಾರವಾದ ಕೈಗಾಡಿ ಜಗ್ಗುವುದು ಅವರ ಅನಿವಾರ್ಯತೆಯಾಗಿದೆ.

ಮಹಾಂತೇಶ್ ಕೋಳಿವಾಡ ಅವರ ಕುಟುಂಬದ ಹಿನ್ನೆಲೆ ಇನ್ನಷ್ಟು ನೋವುಂಟು ಮಾಡುತ್ತದೆ. ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾದರೂ ಕುಟುಂಬಕ್ಕೆ ನೆಮ್ಮದಿ ಸಿಗಲಿಲ್ಲ. ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರು ಅಕಾಲಿಕವಾಗಿ ಮೃತಪಟ್ಟಿದ್ದು, ಅವರ ಮಕ್ಕಳಲ್ಲಿ ಒಬ್ಬ ಮೊಮ್ಮಗನ ಸಂಪೂರ್ಣ ಜವಾಬ್ದಾರಿ ಅಜ್ಜ-ಅಜ್ಜಿಯ ಹೆಗಲೇರಿದೆ. ಇನ್ನೊಬ್ಬ ಮಗ ದುಶ್ಚಟಗಳಿಗೆ ಬಲಿಯಾಗಿ ತಂದೆ-ತಾಯಿಗೆ ಆಸರೆಯಾಗದೆ ತನ್ನ ಪತ್ನಿಯ ಊರಿನಲ್ಲಿ ವಾಸಿಸುತ್ತಿದ್ದಾನೆ. ಮತ್ತೊಂದೆಡೆ ಮಗಳ ಪತಿಯೂ ಮೃತಪಟ್ಟಿದ್ದು, ಆಕೆಯ ಒಂದು ಹೆಣ್ಣು ಮಗುವಿನ ಜವಾಬ್ದಾರಿಯೂ ಇದೇ ವೃದ್ಧ ದಂಪತಿಯ ಮೇಲಿದೆ.

ಹೀಗಾಗಿ ಇಂದು ಮಹಾಂತೇಶ್ ಕೋಳಿವಾಡ, ಅವರ ಪತ್ನಿ, ಮಗಳು ಹಾಗೂ ಇಬ್ಬರು ಮೊಮ್ಮಕ್ಕಳು ಸೇರಿದಂತೆ ಐದು ಜನರ ಕುಟುಂಬದ ಜೀವನೋಪಾಯವನ್ನು ಸಾಗಿಸುವ ಹೊಣೆ ಸಂಪೂರ್ಣವಾಗಿ ಈ ಹಿರಿಯ ಶ್ರಮಜೀವಿಯ ಮೇಲಿದೆ. ಮಗಳು ಮನೆಗೆಲಸ ಮಾಡಿ ತರುವ ಅಲ್ಪ ಆದಾಯವನ್ನು ಹೊರತುಪಡಿಸಿದರೆ ಕುಟುಂಬಕ್ಕೆ ಬೇರೆ ಯಾವುದೇ ಆದಾಯದ ಮೂಲವಿಲ್ಲ.

ಪ್ರತಿನಿತ್ಯ ನಾಲ್ಕರಿಂದ ಐದು ಕ್ವಿಂಟಲ್ ಭಾರದ ಸರಕು ತುಂಬಿದ ಕೈಗಾಡಿಯನ್ನು ನಗರದ ರಸ್ತೆಗಳಲ್ಲಿ ಎಳೆಯುತ್ತಿರುವ ದೃಶ್ಯ ಕಂಡರೆ ಯಾರ ಕಣ್ಣಲ್ಲಾದರೂ ನೀರು ಬರುತ್ತದೆ. ವಯಸ್ಸಿನ ಭಾರ, ಆರೋಗ್ಯ ಸಮಸ್ಯೆಗಳ ನಡುವೆಯೂ ದುಡಿಯದೇ ಬೇರೆ ದಾರಿಯಿಲ್ಲದ ಕಾರಣ ಅವರು ತಮ್ಮ ಜೀವನವನ್ನು ಹೀಗೆ ಸಾಗಿಸುತ್ತಿದ್ದಾರೆ.

ಪ್ರಸ್ತುತ ಸರ್ಕಾರದಿಂದ ಅವರಿಗೆ ತಿಂಗಳಿಗೆ ಕೇವಲ ₹1,200 ವೃದ್ಧಾಪ್ಯ ವೇತನ ಮಾತ್ರ ದೊರೆಯುತ್ತಿದೆ. ಆದರೆ ಇಂದಿನ ದುಬಾರಿ ಜೀವನದಲ್ಲಿ ಐದು ಜನರ ಕುಟುಂಬ ನಿರ್ವಹಣೆ, ಆಹಾರ, ಔಷಧೋಪಚಾರ ಹಾಗೂ ಇತರೆ ಅಗತ್ಯ ವೆಚ್ಚಗಳಿಗೆ ಈ ಹಣ ಯಾವುದೇ ರೀತಿಯಲ್ಲೂ ಸಾಕಾಗುತ್ತಿಲ್ಲ. ಕುಟುಂಬಕ್ಕೆ ಗಂಡು ಮಕ್ಕಳಿಂದಲೂ ಯಾವುದೇ ಸಹಾಯ ದೊರೆಯುತ್ತಿಲ್ಲ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಹಿರಿಯ ಸಮಾಜಸೇವಕ ಹೀರಾಲಾಲ ಸಿಂಗ್ರಿ ಅವರು ಮಹಾಂತೇಶ್ ಕೋಳಿವಾಡ ಅವರನ್ನು ಗೌರವಿಸಿ ಸನ್ಮಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಂತಹ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಮಾಜದ ವಿವಿಧ ವಲಯಗಳಿಂದ ಸಹಾಯಹಸ್ತ ಚಾಚುವಂತೆ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಹಾಗೂ ಹಿರಿಯ ಸಮಾಜಸೇವಕ ಹೀರಾಲಾಲ ಸಿಂಗ್ರಿ, ಇದು ಕೇವಲ ಒಂದು ಬಡ ಕುಟುಂಬದ ಸಮಸ್ಯೆಯಲ್ಲ. ಇಳಿವಯಸ್ಸಿನಲ್ಲಿಯೂ ಸ್ವಾಭಿಮಾನದಿಂದ ದುಡಿದು ಕುಟುಂಬವನ್ನು ಸಾಕುತ್ತಿರುವ ಹಿರಿಯ ಶ್ರಮಜೀವಿಯ ಬದುಕಿನ ಹೋರಾಟವಾಗಿದೆ. ಸರ್ಕಾರ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಮಹಾಂತೇಶ್ ಪರಪ್ಪ ಕೋಳಿವಾಡ ಅವರ ಕುಟುಂಬಕ್ಕೆ ಪ್ರತಿ ತಿಂಗಳು ₹10 ಸಾವಿರ ವಿಶೇಷ ಮಾಸಾಶನ ಮಂಜೂರು ಮಾಡಬೇಕು. ಜೊತೆಗೆ ವಾಸಿಸಲು ಉಚಿತ ಮನೆ ಕಲ್ಪಿಸಿ, ಜೀವನೋಪಾಯಕ್ಕೆ ಅಗತ್ಯ ನೆರವು ನೀಡುವ ಮೂಲಕ ಈ ಹಿರಿಯ ಜೀವಿಗೆ ನೆಮ್ಮದಿಯ ಬದುಕು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಡವರ ಪರ ಕಾಳಜಿ ಹೊಂದಿರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಈ ಕುಟುಂಬದ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ ಅಗತ್ಯ ನೆರವು ನೀಡುವ ಮೂಲಕ ಮಾನವೀಯತೆ ತೋರಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande