ಎಲ್ಜಿ ಫೌಂಡೇಷನ್ನಿ0ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ
ಎಲ್ಜಿ ಫೌಂಡೇಷನ್ನಿ0ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ
ಕೋಲಾರದಲ್ಲಿ ಎಲ್.ಜಿ ಫೌಂಡೇಷನ್ ವತಿಯಿಂದ ಪತ್ರಕರ್ತರ ಮಕ್ಕಳಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.


ಕೋಲಾರ, ೨೯ ಜೂನ್ (ಹಿ.ಸ) :

ಆ್ಯಂಕರ್ : ದೇವರು ಕೊಟ್ಟಿದ್ದನ್ನು ಇತರರಿಗೆ ಹಂಚಿ, ಬಡವರಿಗೆ ಸಹಾಯ ಮಾಡುವ ಮಾಡುವ ಸೇವಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ, ಶಾಂತಿಯನ್ನು ನೀಡುತ್ತವೆ ಎಂದು ಎಲ್.ಜಿ.ಫೌಂಡೇಷನ್ ಸಂಸ್ಥಾಪಕ ಎಂ.ಲಕ್ಷ್ಮಣಗೌಡ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಹಾಗೂ ಎಲ್.ಜಿ ಫೌಂಡೇಷನ್ ವತಿಯಿಂದ ಪತ್ರಕರ್ತರ ಮಕ್ಕಳಿಗೆ ಹಾಗೂ ೧೧ ಸರ್ಕಾರಿ ಶಾಲೆಯ ೬೦೦ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳ ವಿತರಿಸಿ ಮಾತನಾಡಿದರು.

ನನ್ನ ಜೀವನದಲ್ಲಿ ಎಲ್ಲಾ ಸಂಪಾದನೆ ಮಾಡಿದ್ದೇನೆ, ಮುಂದೆ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ತನ್ನ ಕುಟುಂಬದವರ ಬೆಂಬಲದಿ0ದ ಸಮಾಜ ಸೇವೆ ಮಾಡಲು ಮುಂದಾಗಿ ನಿಸ್ವಾರ್ಥ ಸೇವೆ ಮಾಡುವ ಮೂಲಕ ನನ್ನ ಮನಸ್ಸಿಗೆ ಸಂತೋಷವನ್ನು ಪಡೆದುಕೊಳ್ಳುತ್ತಿದ್ದೇನೆ. ರಾಜಕಾರಣಕ್ಕೆ ಬುನಾದಿ ಹಾಕಲು ಸೇವೆ ಮಾಡಲು ಬಂದಿದ್ದಾರೆ ಎಂದು ಅರ್ಥೈಸಿಕೊಳ್ಳುತ್ತಾರೆ. ಕೋಟಿಗಟ್ಟಲೆ ಹಣವಿದ್ದರೂ ಎಂಎಲ್ಎ, ಎಂಪಿ ಆಗಲು ಸಾಧ್ಯವಿಲ್ಲ. ಜನರ ಆಶೀರ್ವಾದ, ಪ್ರೀತಿ ಅವರು ನೀಡುವ ಭಿಕ್ಷೆಯಿಂದ ಅಧಿಕಾರ ಪಡೆಯಬಹುದು ಎಂದರು.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ನೀವು ಚೆನ್ನಾಗಿ ಓದಿ ಉನ್ನತ ಸ್ಥಾನಕ್ಕೆ ಬರಬೇಕೆಂದು ತನ್ನ ಅಳಿಲು ಸೇವೆ ಮಾಡುತ್ತಿದ್ದೇನೆ ಇದರ ಸದುಪಯೋಗ ಪಡೆದುಕೊಳ್ಳಿ. ಖಡ್ಗಕ್ಕಿಂತ ಪೆನ್ನು ಹರಿತವೆಂದು ಜಗ್ಜಾಹಿರತವಾಗಿದೆ. ಅದರಂತೆ ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಅವರದೇ ಆದ ಕರ್ತವ್ಯದ ಸೇವೆಯನ್ನು ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಸ್ವಂತಿಕೆ, ಸ್ವಾಭಿಮಾನವನ್ನು ಅಡಮಾನ ಇಡಬೇಡಿ. ಎಷ್ಟೇ ಕಷ್ಟ ಬಂದರೂ ನಿಮ್ಮತನವನ್ನು ಮಾರಿಕೊಳ್ಳಬೇಡಿ ಎಂದು ಹೇಳಿದರು.

ಮೊನ್ನೆ ನಡೆದ ಕೆಂಪೇಗೌಡರ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಯನ್ನು ಎಲ್.ಜಿ ಫೌಂಡೇಶನ್ ವತಿಯಿಂದ ದತ್ತು ಪಡೆದು ಅತ್ಯುನ್ನತ ವಿದ್ಯಾಭ್ಯಾಸ ಮಾಡಲು ಸಹಾಯ ಮಾಡುತ್ತಿದ್ದಾನೆ ಎಂದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ನಮ್ಮ ಸಹಕಾರ ಸಂಘದಡಿ ಶೇರುದಾರರಿಗೆ ಬಡ್ಡಿ ರಹಿತ ಸಾಲ, ಯಶಸ್ವಿನಿ ಕಾರ್ಡ್ ವಿತರಣೆ ಹಾಗೂ ಸದಸ್ಯತ್ವ ಅಭಿಯಾನ ಮಾಡಿಕೊಂಡು ಬರುತ್ತಿದ್ದು, ಇದೇ ಮೊದಲ ಬಾರಿಗೆ ಹೊರಗೆ ಬಂದು ಸಹಾಯ ಮಾಡಲು ಮುಂದಾಗಿದ್ದೇವೆ. ಇದಕ್ಕೆಲ್ಲಾ ಕಾರಣರೂ ಎಲ್.ಜಿ.ಫೌಂಡೇಷನ್ ಸಂಸ್ಥಾಪಕ ಎಂ.ಲಕ್ಷ್ಮಣಗೌಡರು ಎಂದು ಹೇಳಿದರು.

ಕೆಲವರು ರಾಜಕಾರಣದಲ್ಲಿ ಬೆಳೆಯಬೇಕು, ಅತ್ಯುನ್ನತ ಸ್ಥಾನಗಳನ್ನು ಗಳಿಸಬೇಕು ಎಂದು ಸೇವೆ ಮಾಡಲು ಬರುತ್ತಾರೆ. ಆದರೆ ಲಕ್ಷ್ಮಣಗೌಡರು ಯಾವುದೇ ನಿರೀಕ್ಷೆ, ಆಸೆಪಡದೆ ಜನರ ಸೇವೆ ಮಾಡಲು ಬಂದಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕವಾಗಿ ಸಹಾಯ ಮಾಡಿದರೆ ಚೆನ್ನಾಗಿ ಓದುತ್ತಾರೆ ಎಂಬ ಅಭಿಲಾಷೆಯಿಂದ ಈ ಸಹಾಯವನ್ನು ಮಾಡಲಾಗುತ್ತಿದೆ. ನಮ್ಮ ಸಹಕಾರ ಸಂಘದಿ0ದ ಇನ್ನೂ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮಾಂತರ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಎಲ್.ಜಿ. ಫೌಂಡೇಷನ್ನ ಎಲ್.ಎಸ್. ಲತಾ ಲಕ್ಷ್ಮಣಗೌಡ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು, ಯಾವುದೇ ಖಾಸಗಿ ಶಾಲೆಯ ಮಕ್ಕಳಗಿಂತ ಕಡಿಮೆಯಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದ ಎಷ್ಟೋ ಮಹಾನುಭಾವರು ನಮ್ಮ ಕಣ್ಣ ಮುಂದೆ ಇದ್ದಾರೆ. ಇವರಂತೆ ನೀವು ಸಹ ಚೆನ್ನಾಗಿ ಓದಿ ಪೋಷಕರಿಗೆ ಹಾಗೂ ದೇಶಕ್ಕೆ ಉತ್ತಮ ಹೆಸರನ್ನು ತನ್ನಿ ಎಂದು ಆಶಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿ ಸಹಕಾರ ಸಂಘ ಪ್ರಾರಂಭವಾಗಿ ೨೦ ವರ್ಷಗಳಾಗಿದೆ. ಈಗ ನಾವೆಲ್ಲರೂ ಹೊರಗೆ ಬಂದು ಸಮಾಜಮುಖಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದೇವೆ. ಲಕ್ಷ್ಮಣಗೌಡರಂತಹ ದಾನಿಗಳು ಮುಂದೆ ಬಂದರೆ ಇನ್ನೂ ಅನೇಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸದಾನಂದ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಲಕ್ಷ್ಮಣಗೌಡರುಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಇದೇ ವೇಳೆ ನಗರ ಮತ್ತು ಸುತ್ತಮುತ್ತಲ ಒಟ್ಟು ೧೧ ಸರ್ಕಾರಿ ಶಾಲೆಗಳ ೬೦೦ಕ್ಕೂ ಹೆಚ್ಚು ಮಕ್ಕಳಿಗೆ ಪರಿಕರಗಳನ್ನು ಗಣ್ಯರು ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್ ಕುಮಾರ್, ಖಜಾಂಚಿ ರಾಜೇಂದ್ರ ಸಿಂಹ ಬಿ.ಎಲ್, ಜಿಲ್ಲಾ ಕಾರ್ಯದರ್ಶಿ ಶಮ್ಗರ್, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಹೆಚ್.ಎನ್. ಮುರಳೀದರ್, ಸಹಕಾರ ಸಂಘದ ನಿರ್ದೇಶಕರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande