ವೆನೆಜುವೆಲಾದಲ್ಲಿ ಮತ್ತೆ ಭೂಕಂಪ
ಕಾರಾಕಾಸ್, 28 ಜೂನ್ (ಹಿ.ಸ.) : ಆ್ಯಂಕರ್ : ಇತ್ತೀಚಿನ ಭೀಕರ ಭೂಕಂಪದಿಂದ ತತ್ತರಿಸಿರುವ ವೆನೆಜುವೆಲಾದಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈ ಬಾರಿ ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ದಾಖಲಾಗಿದೆ. ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಜಿಕಲ್ ಸೆಂಟರ್ (
ಭೂಕಂಪ ಮಾಹಿತಿ


ಕಾರಾಕಾಸ್, 28 ಜೂನ್ (ಹಿ.ಸ.) :

ಆ್ಯಂಕರ್ : ಇತ್ತೀಚಿನ ಭೀಕರ ಭೂಕಂಪದಿಂದ ತತ್ತರಿಸಿರುವ ವೆನೆಜುವೆಲಾದಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈ ಬಾರಿ ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ದಾಖಲಾಗಿದೆ.

ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಜಿಕಲ್ ಸೆಂಟರ್ (ಇಎಂಎಸ್ಸಿ) ನೀಡಿರುವ ಮಾಹಿತಿಯಂತೆ, ಅರಗುವಾ ಕರಾವಳಿಯ ಸಮೀಪ ಸಮುದ್ರದ 30 ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದೆ.

ಇತ್ತೀಚಿನ ಭೂಕಂಪದ ದುರಂತದಿಂದ ಚೇತರಿಸಿಕೊಳ್ಳಲು ಹರಸಾಹಸ ಪಡುತ್ತಿರುವ ದೇಶಕ್ಕೆ ಈ ಹೊಸ ಕಂಪನ ಮತ್ತೊಂದು ಆತಂಕವನ್ನು ತಂದೊಡ್ಡಿದೆ.

ಈ ನಡುವೆ, ವೆನೆಜುವೆಲಾದ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಜಾರ್ಜ್ ರೊಡ್ರಿಗ್ಸ್, ಜೂನ್ 24ರಂದು ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಅಧಿಕೃತ ಸಂಖ್ಯೆ 1,430ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ 3,238 ಮಂದಿ ಗಾಯಗೊಂಡಿದ್ದು, 3,142 ಕುಟುಂಬಗಳು ನಿರಾಶ್ರಿತರಾಗಿವೆ. ಭೂಕಂಪದಿಂದ ತೀವ್ರವಾಗಿ ಬಾಧಿತವಾಗಿರುವ ಏಳು ರಾಜ್ಯಗಳಲ್ಲಿ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ 10 ರಾಷ್ಟ್ರಗಳ ರಕ್ಷಣಾ ತಂಡಗಳು ಶೀಘ್ರದಲ್ಲೇ ಪರಿಹಾರ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದ್ದಾರೆ.

ಲಾ ಗ್ವೈರಾ ಪ್ರದೇಶದಲ್ಲಿ ಭದ್ರತೆ ಹಾಗೂ ಸ್ವಚ್ಛತಾ ಕಾರ್ಯಕ್ಕಾಗಿ 14 ಸಾವಿರಕ್ಕೂ ಹೆಚ್ಚು ಸೈನಿಕರು ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ ಭೂಕಂಪದ ಕೇಂದ್ರಬಿಂದುವಾಗಿದ್ದ ಮೊರೊನ್ ಮತ್ತು ಲಾ ಗ್ವೈರಾದ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆ ಇನ್ನೂ ಸಂಪೂರ್ಣವಾಗಿ ಮರುಸ್ಥಾಪನೆಯಾಗಿಲ್ಲ.

ಭೂಕಂಪದಿಂದ ಲಾ ಗ್ವೈರಾ ನಗರದಲ್ಲಿನ ಕನಿಷ್ಠ 100 ಬಹುಮಹಡಿ ವಸತಿ ಕಟ್ಟಡಗಳು ಸಂಪೂರ್ಣ ಅಥವಾ ಭಾಗಶಃ ಹಾನಿಗೊಳಗಾಗಿವೆ. ಭಾರಿ ಯಂತ್ರೋಪಕರಣಗಳ ಕೊರತೆ ಹಾಗೂ ಪರಿಹಾರ ಕಾರ್ಯದ ನಿಧಾನಗತಿಯ ಕಾರಣದಿಂದ ರಕ್ಷಣಾ ಕಾರ್ಯಾಚರಣೆ ಸವಾಲಿನದ್ದಾಗಿದೆ ಎಂದು ಸ್ಥಳೀಯರು ಮತ್ತು ಸ್ವಯಂಸೇವಕರು ತಿಳಿಸಿದ್ದಾರೆ.

ಸರ್ಕಾರದ ಪ್ರಕಾರ, ನೂರಾರು ಮಂದಿ ಇನ್ನೂ ನಾಪತ್ತೆಯಾಗಿದ್ದು, ಹಲವರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ಇದೇ ವೇಳೆ, ಪ್ರತಿಪಕ್ಷ ಬೆಂಬಲಿತ ವೆಬ್ಸೈಟ್ ಒಂದು 54 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಿಕೊಂಡಿದೆ. ಆದರೆ ಈ ಸಂಖ್ಯೆಗೆ ಸರ್ಕಾರದಿಂದ ಅಧಿಕೃತ ದೃಢೀಕರಣ ದೊರೆತಿಲ್ಲ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (ಯುಎಸ್ಜಿಎಸ್) ಅಂದಾಜಿನ ಪ್ರಕಾರ, 7.2 ಮತ್ತು 7.5 ತೀವ್ರತೆಯ ಭೂಕಂಪಗಳ ಪರಿಣಾಮವಾಗಿ ಸಾವಿನ ಸಂಖ್ಯೆ 10 ಸಾವಿರ ದಾಟುವ ಸಾಧ್ಯತೆಯಿದೆ. ಈ ಅಂದಾಜು ನಿಜವಾದರೆ, ಕಳೆದ ಶತಮಾನದಲ್ಲಿ ಲ್ಯಾಟಿನ್ ಅಮೆರಿಕ ಕಂಡ ಅತ್ಯಂತ ಭೀಕರ ಭೂಕಂಪ ದುರಂತಗಳಲ್ಲಿ ಇದೂ ಒಂದಾಗಲಿದೆ.

ಸಂಯುಕ್ತ ರಾಷ್ಟ್ರಗಳ ಅಂದಾಜಿನಂತೆ, ಈ ಪ್ರಕೃತಿ ವಿಕೋಪದಿಂದ ಸುಮಾರು 70 ಲಕ್ಷ ಜನರು ಬಾಧಿತರಾಗುವ ಸಾಧ್ಯತೆ ಇದ್ದು, ಒಟ್ಟು ಆರ್ಥಿಕ ನಷ್ಟವು ಸುಮಾರು 6.7 ಬಿಲಿಯನ್ ಅಮೆರಿಕನ್ ಡಾಲರ್ಗೆ ತಲುಪುವ ಸಾಧ್ಯತೆಯಿದೆ. ವಿವಿಧ ರಾಷ್ಟ್ರಗಳಿಂದ ಈಗಾಗಲೇ 1,600ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ವೆನೆಜುವೆಲಾಕ್ಕೆ ಆಗಮಿಸಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳಿಂದ ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ವಿಮಾನಗಳೂ ಕಾರಾಕಾಸ್ಗೆ ತಲುಪಿವೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande