ಮತ್ತೆ ಭುಗಿಲೆದ್ದ ಮಧ್ಯಪ್ರಾಚ್ಯ ಸಂಘರ್ಷ
ಮತ್ತೆ ಭುಗಿಲೆದ್ದ ಮಧ್ಯಪ್ರಾಚ್ಯ ಸಂಘರ್ಷ: ಇರಾನ್ ಮೇಲೆ ಅಮೆರಿಕದ ವೈಮಾನಿಕ ದಾಳಿ, ಬಹರೇನ್–ಕುವೈತ್ನಲ್ಲಿ ಕ್ಷಿಪಣಿ ಎಚ್ಚರಿಕೆ ಸೈರನ್
ವಿಮಾನ ದಾಳಿ


ತೆಹ್ರಾನ್, 28 ಜೂನ್ (ಹಿ.ಸ.) :

ಆ್ಯಂಕರ್ : ಕೆಲ ದಿನಗಳ ಶಾಂತಿಯ ಬಳಿಕ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ತೀವ್ರಗೊಂಡಿದೆ. ಹೋರ್ಮುಜ್ ಜಲಸಂಧಿಯ ಸಮೀಪ ವಾಣಿಜ್ಯ ಹಡಗಿನ ಮೇಲೆ ಡ್ರೋನ್ ದಾಳಿ ನಡೆದ ಹಿನ್ನೆಲೆಯಲ್ಲಿ ಅಮೆರಿಕ ಸತತ ಎರಡನೇ ದಿನವೂ ಇರಾನ್ನ ಹಲವು ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಸಿರಿಕ್ ನಗರ, ಬಂದರ್-ಎ-ಲೆಂಗೆ ಹಾಗೂ ಕೇಶ್ಮ್ ದ್ವೀಪ ಸೇರಿದಂತೆ ಹಲವು ಕರಾವಳಿ ಪ್ರದೇಶಗಳು ದಾಳಿಗೆ ಗುರಿಯಾಗಿವೆ ಎಂದು ವರದಿಯಾಗಿದೆ.

ಅಮೆರಿಕದ ದಾಳಿಯ ಬೆನ್ನಲ್ಲೇ ಬಹರೇನ್ ಹಾಗೂ ಕುವೈತ್ನಲ್ಲಿ ವೈಮಾನಿಕ ದಾಳಿ ಎಚ್ಚರಿಕೆ ಸೈರನ್ ಮೊಳಗಿದ್ದು, ಕುವೈತ್ ಸೇನೆ ಶತ್ರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಪ್ರತಿರೋಧ ನೀಡಲಾಗುತ್ತಿದೆ ಎಂದು ತಿಳಿಸಿದೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.

ಇದೇ ವೇಳೆ, ಲೆಬನಾನ್ ಸರ್ಕಾರದೊಂದಿಗೆ ಉದ್ವಿಗ್ನತೆ ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾದ ಒಪ್ಪಂದಕ್ಕೆ ಸಹಿ ಹಾಕಿದ ಮರುದಿನವೇ ಇಸ್ರೇಲ್ ದಕ್ಷಿಣ ಲೆಬನಾನ್ ಮೇಲೆ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ. ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್, ಇಸ್ರೇಲ್ ದಾಳಿಯನ್ನು ತಡೆಯಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

ಇನ್ನೊಂದೆಡೆ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ, ಲೆಬನಾನ್–ಇಸ್ರೇಲ್ ಒಪ್ಪಂದವನ್ನು ತಿರಸ್ಕರಿಸಿದ್ದು, ಅದನ್ನು ದೇಶದ ಸಾರ್ವಭೌಮತ್ವಕ್ಕೆ ಶರಣಾಗತಿ ಎಂದು ಟೀಕಿಸಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್ಕಾಂ) ನೀಡಿರುವ ಮಾಹಿತಿಯಂತೆ, ಇರಾನ್ನ 10ಕ್ಕೂ ಹೆಚ್ಚು ಸೇನಾ ನೆಲೆಗಳು, ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹ ಕೇಂದ್ರಗಳು ಹಾಗೂ ಕರಾವಳಿ ರಾಡಾರ್ ವ್ಯವಸ್ಥೆಗಳ ಮೇಲೆ ಯುದ್ಧ ವಿಮಾನಗಳಿಂದ ದಾಳಿ ನಡೆಸಲಾಗಿದೆ. ಹೋರ್ಮುಜ್ ಜಲಸಂಧಿಯ ಸುತ್ತಮುತ್ತ ಈ ಕಾರ್ಯಾಚರಣೆ ನಡೆದಿದ್ದು, ಅದರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳಲಾಗಿದೆ.

ಇದಕ್ಕೆ ಪ್ರತಿಯಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ), ಅಮೆರಿಕ ತನ್ನ ಐದು ಕರಾವಳಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಿರುವುದನ್ನು ದೃಢಪಡಿಸಿದೆ. ಈ ದಾಳಿಗೆ ತಕ್ಕ ಪ್ರತೀಕಾರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿರುವ ಐಆರ್ಜಿಸಿ, ಹೋರ್ಮುಜ್ ಜಲಸಂಧಿಯಲ್ಲಿನ ಸಾಗಾಣಿಕೆ ನಿಯಮ ಉಲ್ಲಂಘಿಸುವ ಹಡಗುಗಳ ವಿರುದ್ಧ ಇನ್ನು ಮುಂದೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಯುದ್ಧ ವಿರಾಮ ಉಲ್ಲಂಘಿಸಿರುವುದರಿಂದಲೇ ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ. ಪನಾಮಾ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಗೆ ಪ್ರತಿಯಾಗಿ ಅಮೆರಿಕ ಈ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಸುಮಾರು 20 ಲಕ್ಷ ಬ್ಯಾರೆಲ್ಗೂ ಅಧಿಕ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಗುರಿಯಾಗಿತ್ತು ಎಂದು ಅಮೆರಿಕ ಆರೋಪಿಸಿದೆ.

ಇದಕ್ಕೆ ಪ್ರತಿಯಾಗಿ ಇರಾನ್, ಕುವೈತ್ನ ಅಲಿ ಅಲ್ ಸಲೇಮ್ ವಾಯುನೆಲೆ ಹಾಗೂ ಬಹರೇನ್ ರಾಜಧಾನಿ ಮನಾಮಾದಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ತಾಣದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಐಆರ್ಜಿಸಿ ಹೇಳಿಕೆ ನೀಡಿದೆ. ಈ ದಾಳಿ ಅಮೆರಿಕದ ಬಾಂಬ್ ದಾಳಿಗೆ ಪ್ರತೀಕಾರವಾಗಿದೆ ಎಂದು ತಿಳಿಸಲಾಗಿದೆ. ಬಹರೇನ್ ಮೇಲಿನ ಡ್ರೋನ್ ದಾಳಿಯನ್ನು ಓಮನ್ ಖಂಡಿಸಿದೆ.

ಫೆಬ್ರವರಿ ಅಂತ್ಯದಿಂದ ಆರಂಭವಾದ ಈ ಸಂಘರ್ಷವು ಹಲವು ಹಂತದ ಶಾಂತಿ ಮಾತುಕತೆಗಳ ನಡುವೆಯೂ ಅಂತ್ಯಗೊಳ್ಳದೆ ಮುಂದುವರಿದಿದೆ. ಇತ್ತೀಚೆಗೆ ಸ್ವಿಟ್ಜರ್ಲ್ಯಾಂಡ್ನಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ನಡೆದ ಶಾಂತಿ ಮಾತುಕತೆಗಳು ಆಶಾಕಿರಣ ಮೂಡಿಸಿದ್ದರೂ, ಹೊಸದಾಗಿ ಆರಂಭವಾದ ಸೇನಾ ದಾಳಿಗಳು ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ಮತ್ತೊಮ್ಮೆ ಗಂಭೀರಗೊಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande