
ವಿಜಯಪುರ, 27 ಜೂನ್ (ಹಿ.ಸ.) :
ಆಂಕರ್ : ಪೋಲಿಯೋ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಲಸಿಕೆ, ಜಾಗೃತಿ ಹಾಗೂ ಸ್ವಚ್ಛತೆಯ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ
ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್ ಹಾಗೂ ಯುಬಿಎಸ್ ಶಾಲೆಗಳ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕೆ ಜಾಗೃತಿ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಕ್ಕಳಿಗೆ ನೀಡುವ ಕೇವಲ ಎರಡು ಹನಿ ಪೋಲಿಯೋ ಲಸಿಕೆ ಜೀವಮಾನದ ರಕ್ಷಣೆಯನ್ನು ಒದಗಿಸುತ್ತದೆ. ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವಾಗಿ ಉಳಿಸಿಕೊಳ್ಳಲು ಪ್ರತಿಯೊಬ್ಬ ಪೋಷಕರು ತಮ್ಮ 0 ರಿಂದ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಸಂತೋಷ ಬಂಡೆ ತಿಳಿಸಿದರು.
ಪೋಲಿಯೋ ಎಂಬುದು ಗಂಭೀರ ವೈರಸ್ ರೋಗವಾಗಿದ್ದು, ಇದು ನರಮಂಡಲದ ಮೇಲೆ ಪರಿಣಾಮ ಬೀರಿ ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು. ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಲಸಿಕೆ ನೀಡುವುದೇ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಶಿಕ್ಷಕ ಶ್ರೀಧರ ಹಿಪ್ಪರಗಿ ಹೇಳಿದರು.
ಜಾಗೃತಿ ಜಾಥಾದಲ್ಲಿ ಮಕ್ಕಳು ಪೋಲಿಯೋ ನಿರ್ಮೂಲನೆ ಕುರಿತ ಘೋಷಣೆಗಳನ್ನು ಕೂಗಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಪ್ರತಿ ಮಗುವಿಗೂ ಪೋಲಿಯೋ ಹನಿ ಹಾಕಿಸುವಂತೆ ಪೋಷಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಎಸ್.ಬಿ. ಕೋಳಿ, ಕೆ.ಐ. ಮಕಾನದಾರ, ಶಾಲೆಯ ಎಲ್ಲಾ ಶಿಕ್ಷಕರು, ತಾಂಬಾ ಎಎನ್ಎಂ ಎಸ್.ಎಸ್. ಹೊನ್ನಮೊರೆ, ಆಶಾ ಕಾರ್ಯಕರ್ತೆಯರಾದ ಸುಜಾತಾ ಚಾಂದಕವತೆ, ಇಂದುಮತಿ ಹಳ್ಳದಮನಿ, ಎಸ್.ಎನ್. ಬೇನೂರ, ಎಸ್.ಆರ್. ಹರವಾಳ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande