ನೂತನ ಮಹಾರಥ, ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ, ಧಾರ್ಮಿಕ ಕಾರ್ಯಕ್ರಮ
ಗದಗ, 27 ಜೂನ್ (ಹಿ.ಸ.) : ಆ್ಯಂಕರ್ : ಉತ್ತರ ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯ ಪ್ರತೀಕವಾಗಿರುವ ಗದಗ ನಗರದ ಗಂಗಾಪುರಪೇಟೆಯ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಈ ವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು, ಜೂನ್ 28ರಿಂದ ಜುಲೈ 13ರವರೆಗೆ ನಡೆಯುವ ಈ ಮಹೋತ್ಸವಕ್ಕೆ ಸಕಲ
ಫೋಟೋ


ಗದಗ, 27 ಜೂನ್ (ಹಿ.ಸ.) :

ಆ್ಯಂಕರ್ : ಉತ್ತರ ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯ ಪ್ರತೀಕವಾಗಿರುವ ಗದಗ ನಗರದ ಗಂಗಾಪುರಪೇಟೆಯ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಈ ವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು, ಜೂನ್ 28ರಿಂದ ಜುಲೈ 13ರವರೆಗೆ ನಡೆಯುವ ಈ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಬಾರಿಯ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಭಕ್ತರ ಸಹಕಾರದಿಂದ ನಿರ್ಮಾಣಗೊಂಡ ನೂತನ ಮಹಾರಥ ಹಾಗೂ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಭಕ್ತರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಜಾತ್ರೆಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ; ಅವು ಸಮಾಜದಲ್ಲಿ ಸಾಮರಸ್ಯ, ಭ್ರಾತೃತ್ವ, ಸಹಬಾಳ್ವೆ ಹಾಗೂ ಸಂಸ್ಕೃತಿಯ ಉಳಿವಿಗೆ ಜೀವ ತುಂಬುವ ಮಹೋತ್ಸವಗಳಾಗಿವೆ. ಗ್ರಾಮೀಣ ಜೀವನದ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಜಾತ್ರೆಗಳು ಇಂದಿಗೂ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿವೆ. ಈ ನಿಟ್ಟಿನಲ್ಲಿ ಗಂಗಾಪುರಪೇಟೆಯ ಶ್ರೀ ದುರ್ಗಾದೇವಿ ಜಾತ್ರೆ ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಈ ಬಾರಿಯ ಮಹೋತ್ಸವದಲ್ಲಿ ಭಕ್ತರ ಕಾಣಿಕೆಯಿಂದ ನಿರ್ಮಾಣಗೊಂಡಿರುವ ಭವ್ಯ ನೂತನ ಮಹಾರಥ ಮೊದಲ ಬಾರಿಗೆ ಜಗನ್ಮಾತೆ ಶ್ರೀ ದುರ್ಗಾದೇವಿಯನ್ನು ಹೊತ್ತು ಸಾಗಲಿದ್ದು, ಅದರ ಶಿಲ್ಪಕಲೆ, ಕೆತ್ತನೆ ಹಾಗೂ ಕಲಾತ್ಮಕ ವಿನ್ಯಾಸ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವಂತಿದೆ.

ಜುಲೈ 2ರಂದು ಬೆಳಿಗ್ಗೆ ಶುಭ ಕರ್ಕಾಟಕ ಲಗ್ನದಲ್ಲಿ ರಥ ಪ್ರತಿಷ್ಠಾಪನೆ ಹಾಗೂ ರಥಾಂಗ ಹೋಮ ನೆರವೇರಲಿದ್ದು, ಜುಲೈ 8ರಂದು ಸಂಜೆ 6.12ಕ್ಕೆ ನೂತನ ಮಹಾರಥದಲ್ಲಿ ಜಗನ್ಮಾತೆ ವಿರಾಜಮಾನಳಾಗಿ ಭವ್ಯ ರಥೋತ್ಸವದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾರೆ.

ಜಾತ್ರೆಯ ಅಂಗವಾಗಿ ಜೂನ್ 28ರಿಂದಲೇ ತೋರಣ ಪೂಜೆ, ಗುರು ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ, ಮಹಾಸಂಕಲ್ಪ, ಜಲಾಧಿವಾಸ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ನಂತರದ ದಿನಗಳಲ್ಲಿ ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ವಾಸ್ತು ಹೋಮ, ಕಲಶ ಸ್ಥಾಪನೆ, ಧಾನ್ಯಾಧಿವಾಸ, ಶಯ್ಯಾಧಿವಾಸ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ವೇದಮೂರ್ತಿ ಬ್ರಹ್ಮಶ್ರೀ ಸಿದ್ದೇಶ ಶರ್ಮಾ ಅವರ ಪ್ರಧಾನ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ನಡೆಯಲಿವೆ.

ಜುಲೈ 1ರಂದು ಬ್ರಾಹ್ಮೀ ಮುಹೂರ್ತದಲ್ಲಿ ನೂತನ ಬೆಳ್ಳಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮೀಲನ, ಕಲಾಭಿಷೇಕ, ಚಂಡಿಕಾ ಹೋಮ, ಮಹಾಪೂರ್ಣಾಹುತಿ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಇದೇ ದಿನ ಸಂಜೆ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಬೆಳ್ಳಿ ಮೂರ್ತಿ ಉದ್ಘಾಟನಾ ಸಮಾರಂಭ, ಧಾರ್ಮಿಕ ಉಪನ್ಯಾಸ ಹಾಗೂ ದೇವಿ ನೃತ್ಯ ಕಾರ್ಯಕ್ರಮಗಳು ಜರುಗಲಿವೆ.

ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತತ್ವಗೀತೆ, ಭರತನಾಟ್ಯ, ಜಾನಪದ ನೃತ್ಯ, ದೇವಿ ನೃತ್ಯ, ಡೊಳ್ಳಿನ ಪದಗಳು, ರೈತರ ಜಾಗೃತಿ ಕಾರ್ಯಕ್ರಮ, ಮಹಿಳಾ ಚಿಂತನಗೋಷ್ಠಿ, ಹಾಸ್ಯ ಕಾರ್ಯಕ್ರಮ, ಸಾಮಾಜಿಕ ನಾಟಕ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮಹೋತ್ಸವಕ್ಕೆ ವಿಶೇಷ ಮೆರುಗು ನೀಡಲಿವೆ.

ಜುಲೈ 4ರಂದು ಪವಿತ್ರ ಕಳಸಾರೋಹಣದ ಬಳಿಕ ರೈತರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭೂಮಿ ಫಲವತ್ತತೆ ಹಾಗೂ ಆರೋಗ್ಯದ ಕುರಿತು ತಜ್ಞರಿಂದ ಉಪನ್ಯಾಸ ನಡೆಯಲಿದೆ. ಅದೇ ದಿನ ರಾತ್ರಿ 9 ಗಂಟೆಯಿಂದ ಮೂರು ದಿನಗಳ ಕಾಲ ಗ್ರಾಮದ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ಸಂಪ್ರದಾಯದಂತೆ ಅಂಕಿ ಹಾಕಲಾಗುತ್ತಿದ್ದು, ಈ ಅವಧಿಯಲ್ಲಿ ಧಾನ್ಯ ಕುಟ್ಟುವುದು, ಬೀಸುವುದು ಹಾಗೂ ಜಮೀನಿನಲ್ಲಿ ಗಳೆ ಹೊಡೆಯುವುದನ್ನು ನಿಷೇಧಿಸಲಾಗಿದೆ. ಈ ಸಂಪ್ರದಾಯ ಗ್ರಾಮೀಣ ಸಂಸ್ಕೃತಿ ಹಾಗೂ ದೈವಭಕ್ತಿಯ ಪ್ರತೀಕವಾಗಿದೆ.

ಜುಲೈ 7ರಂದು ವಿವಿಧ ಗ್ರಾಮಗಳ ಡೊಳ್ಳಿನ ಮೇಳಗಳು ಹಾಗೂ ಮಂಗಳವಾದ್ಯಗಳೊಂದಿಗೆ ಜಗನ್ಮಾತೆಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ಜುಲೈ 8ರಂದು ಮಹಾರಥೋತ್ಸವವು ಜಾತ್ರೆಯ ಪರಮೋಚ್ಛ ಘಟ್ಟವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ. ಜುಲೈ 9ರಂದು ಲಘು ರಥೋತ್ಸವ (ಕಡಜನ ಕಾಳಗ) ನಡೆಯಲಿದ್ದು, ಜುಲೈ 10ರಂದು ಸಾಮೂಹಿಕ ವಿವಾಹ ಹಾಗೂ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದೆ.

ಮಹೋತ್ಸವದ ಕೊನೆಯ ದಿನಗಳಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯಲಿದ್ದು, ಜುಲೈ 12ರಂದು ಖ್ಯಾತ ಹಾಸ್ಯ ಕಲಾವಿದರಿಂದ ಹಾಸ್ಯ ಕಾರ್ಯಕ್ರಮ ಹಾಗೂ ಜುಲೈ 13ರಂದು ಸಾಮಾಜಿಕ ಸಂದೇಶ ಸಾರುವ ನಾಟಕ ಪ್ರದರ್ಶನದೊಂದಿಗೆ ಜಾತ್ರೆ ಮಂಗಳೋತ್ಸವದ ಮೂಲಕ ಸಂಪನ್ನಗೊಳ್ಳಲಿದೆ.

ಈ ಬೃಹತ್ ಧರ್ಮೋತ್ಸವದ ಯಶಸ್ಸಿಗಾಗಿ ಶ್ರೀ ದುರ್ಗಾದೇವಿ ದೇವಸ್ಥಾನ ಟ್ರಸ್ಟ್, ಜಾತ್ರಾ ಮಹೋತ್ಸವ ಸಮಿತಿ, ಸಲಹಾ ಸಮಿತಿ ಸದಸ್ಯರು ಹಾಗೂ ನೂರಾರು ಯುವಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ಬಸವರಾಜ ಎಂ. ಬೆಳಧಡಿ, ಕಾರ್ಯದರ್ಶಿ ಎಸ್.ಎಸ್. ಚೌವ್ಹಾಣ್, ಕೋಶಾಧ್ಯಕ್ಷ ಬಿ.ವೈ. ಅಣ್ಣಿಗೇರಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸಿದ್ದಪ್ಪ ಚನಬಸಪ್ಪ ಪಲ್ಲೇದ ಅವರ ನೇತೃತ್ವದಲ್ಲಿ ಸಿದ್ಧತೆಗಳು ಅಂತಿಮ ಹಂತ ತಲುಪಿವೆ.

ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯರು, ಕಲಾವಿದರು ಹಾಗೂ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಸಮಸ್ತ ನಾಡಿನ ಭಕ್ತರು ಆಗಮಿಸಿ ಜಗನ್ಮಾತೆ ಶ್ರೀ ದುರ್ಗಾದೇವಿಯ ಕೃಪಾಶೀರ್ವಾದ ಪಡೆಯುವಂತೆ ಜಾತ್ರಾ ಮಹೋತ್ಸವ ಸಮಿತಿಯವರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande