
ವಿಜಯಪುರ, 27 ಜೂನ್ (ಹಿ.ಸ.) :
ಆಂಕರ್ : ವಿಜಯಪುರ ನಗರದ ಪ್ರತಿಷ್ಠಿತ ಸಭಾಂಗಣದಲ್ಲಿ ಅಭಿಯಂತರರ ವಿಶೇಷ ಸಮಾಲೋಚನಾ ಸಭೆ ನಡೆಯಿತು. ಸಹಕಾರದಿಂದ ಸಮರ್ಥನ ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿದ್ದ ಈ ಸಭೆಯಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಬ್ಯಾಂಕಿನ ವತಿಯಿಂದ ಕಲ್ಪಿಸಲಾಗುತ್ತಿರುವ ವಿವಿಧ ಆರ್ಥಿಕ ಸೌಲಭ್ಯಗಳ ಕುರಿತು ಅಭಿಯಂತರರಿಗೆ ಮಾಹಿತಿ ನೀಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ ಅವರು, ಸಹಕಾರ ಬ್ಯಾಂಕುಗಳು ಜನರ ಆರ್ಥಿಕ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಹಕಾರಿ ಬ್ಯಾಂಕುಗಳು ಅಭಿವೃದ್ಧಿಗೆ ಕೈಜೋಡಿಸುತ್ತಿವೆ. ಸಮಾಜದ ನಿರ್ಮಾಣ ಕಾರ್ಯದಲ್ಲಿ ಅಭಿಯಂತರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಂದು ಕಟ್ಟಡದ ಹಿಂದೆ ಅಭಿಯಂತರರ ಯೋಜನೆ, ಪರಿಶ್ರಮ ಮತ್ತು ತಾಂತ್ರಿಕ ಜ್ಞಾನ ಅಡಗಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಅಭಿಯಂತರರು ಬ್ಯಾಂಕಿನ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಹಕರ ಸಹಕಾರದೊಂದಿಗೆ ಬ್ಯಾಂಕಿನ ವ್ಯವಹಾರ ಮತ್ತಷ್ಟು ವಿಸ್ತಾರಗೊಳ್ಳಲಿದೆ ಎಂದು ಮುಕುಂದ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.
ಅಭಿಯಂತರರ ಸಂಘದ ಅಧ್ಯಕ್ಷ ಅರುಣ ಮಠ ಮಾತನಾಡಿ, ಸಹಕಾರ ಬ್ಯಾಂಕುಗಳು ಆರ್ಥಿಕ ಪ್ರಗತಿಗೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಸಹಕಾರ ಚಳವಳಿ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ಹೊಂದಿದೆ ಎಂದರು.
ಪ್ರತಿಯೊಬ್ಬರಿಗೂ ಉತ್ತಮ ಮನೆ ನಿರ್ಮಾಣ ಮಾಡಿಕೊಳ್ಳುವ ಕನಸು ಇರುತ್ತದೆ. ಆ ಕನಸಿಗೆ ಸಾಕಾರ ರೂಪ ನೀಡುವಲ್ಲಿ ಅಭಿಯಂತರರ ಪಾತ್ರ ಪ್ರಮುಖವಾಗಿದೆ. ಇಂತಹ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್ ಅಭಿಯಂತರರೊಂದಿಗೆ ಕೈಜೋಡಿಸಿ ಆರ್ಥಿಕ ನೆರವು ಹಾಗೂ ಸೌಲಭ್ಯಗಳನ್ನು ಒದಗಿಸಲು ಮುಂದಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿಕಾಸ್ ಪದಕಿ, ನಿರ್ದೇಶಕರಾದ ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ, ಶಂಕರ್ರಾವ್ ಕುಲಕರ್ಣಿ, ಪವನ್ ಕುಲಕರ್ಣಿ, ಬಸವರಾಜ ಪತ್ತಾರ, ರಾಧಾ ತಾವರಗೇರಿ, ಬ್ಯಾಂಕಿನ ಪ್ರಬಂಧಕಿ ಪದ್ಮಾವತಿ ಕುಲಕರ್ಣಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಬ್ಯಾಂಕಿನ ಆರ್ಥಿಕ ಸೇವೆಗಳು ಹಾಗೂ ವಿವಿಧ ಸಾಲ ಸೌಲಭ್ಯಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಬ್ಯಾಂಕಿನ ನಿರ್ದೇಶಕಿ ಹಾಗೂ ಅಭಿಯಂತರರ ಸಂಘದ ನಿರ್ದೇಶಕಿ ವೀಣಾ ಟಂಕಸಾಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಅಭಿಯಂತರರ ಸಂಘದ ಪದಾಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ವರ್ಗದವರು ಭಾಗವಹಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande