
ಯಲಬುರ್ಗಾ, 27 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಇಟಗಿ ಆದರ್ಶ ವಿದ್ಯಾಲಯದಲ್ಲಿ 2026-27ನೇ ಸಾಲಿಗೆ 6ನೇ ತರಗತಿಗೆ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಖಾಲಿ ಉಳಿದಿರುವ ಸೀಟುಗಳ ಭರ್ತಿಗೆ ಕೌನ್ಸಲಿಂಗ್ ಮೂಲಕ ಪ್ರವೇಶ ನೀಡಲಾಗುತ್ತದೆ.
ಈಗಾಗಲೇ ಮೂರು ಹಂತಗಳಲ್ಲಿ ದಾಖಲಾತಿ ಪೂರ್ಣಗೊಂಡಿದ್ದು, ಇನ್ನೂ 24 ಸೀಟುಗಳು ಖಾಲಿ ಉಳಿದಿವೆ. ಈ ಸೀಟುಗಳ ಭರ್ತಿಗೆ 1:30 ಅನುಪಾತದಂತೆ (ಒಂದು ಸೀಟಿಗೆ 30 ವಿದ್ಯಾರ್ಥಿಗಳು) ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಅದರಂತೆ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಜೂನ್ 29 ರಂದು ಬೆಳಿಗ್ಗೆ 10 ಗಂಟೆಗೆ ಮತ್ತು ಮೀಸಲಾತಿ ವರ್ಗದ (ಎಸ್.ಸಿ, ಎಸ್.ಟಿ, ಪ್ರವರ್ಗ-1, ಪ್ರವರ್ಗ-2ಬಿ) ವಿದ್ಯಾರ್ಥಿಗಳಿಗೆ ಜೂನ್ 30ರಂದು ಬೆಳಿಗ್ಗೆ 10 ಗಂಟೆಗೆ ಇಟಗಿ ಆದರ್ಶ ವಿದ್ಯಾಲಯದ ಆವರಣದಲ್ಲಿ ನಡೆಸಲಾಗುವುದು. ಅರ್ಹ ವಿದ್ಯಾರ್ಥಿಗಳ 1:30 ಪಟ್ಟಿಯನ್ನು ಆದರ್ಶ ವಿದ್ಯಾಲಯ, ಇಟಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಯಲಬುರ್ಗಾಗಳಲ್ಲಿ ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಹೆಸರು ಹೊಂದಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಗತ್ಯ ದಾಖಲೆಗಳಾದ ಆಯ್ಕೆ ಪರೀಕ್ಷೆಯ ಪ್ರವೇಶ ಪತ್ರದ ಪ್ರತಿ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಬೇರೆ ತಾಲೂಕು, ಜಿಲ್ಲೆಯ ವಿದ್ಯಾರ್ಥಿಗಳಾದಲ್ಲಿ ಯಲಬುರ್ಗಾ ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರದೊಂದಿಗೆ ಹಾಜರಾಗಬೇಕು ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್