
ವಿಜಯಪುರ, 26 ಜೂನ್ (ಹಿ.ಸ.) :
ಆಂಕರ್ : ಮಾದಕ ದ್ರವ್ಯಗಳ ವಿರೋಧಿ ದಿನದ ಅಂಗವಾಗಿ ವಿಜಯಪುರ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಹಾಗೂ ಕಾನೂನು ಕ್ರಮಗಳಿಗೆ ಮತ್ತಷ್ಟು ಒತ್ತು ನೀಡಲಾಗಿದೆ.
ಪೊಲೀಸ ಇಲಾಖೆ, ಜಿಲ್ಲಾಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜೂನ್ 22ರಿಂದ ಜೂನ್ 26ರವರೆಗೆ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾಗಿದ್ದ ಎನ್ಡಿಪಿಎಸ್ (NDPS) ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ದ್ರವ್ಯಗಳ ನಾಶಪಡಿಸುವ (Drugs Disposal) ಪ್ರಕ್ರಿಯೆಯನ್ನು ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳ ಅನುಸಾರವಾಗಿ ಕೈಗೊಳ್ಳಲಾಯಿತು.
ಜಿಲ್ಲಾ ಮಾದಕ ದ್ರವ್ಯಗಳ ವಿಲೇವಾರಿ ಸಮಿತಿ (Drugs Disposal Committee) ಸದಸ್ಯರ ಸಮ್ಮುಖದಲ್ಲಿ ಒಟ್ಟು 26 ಪ್ರಕರಣಗಳಿಗೆ ಸಂಬಂಧಿಸಿದ 345.822 ಕೆ.ಜಿ ಮಾದಕ ದ್ರವ್ಯಗಳನ್ನು ನಾಶಪಡಿಸಲಾಯಿತು. ನಾಶಪಡಿಸಲಾದ ಮಾದಕ ದ್ರವ್ಯಗಳ ಅಂದಾಜು ಮೌಲ್ಯ ₹81,93,910 ಎಂದು ತಿಳಿಸಲಾಗಿದೆ.
ವಿಜಯಪುರ ನಗರದ ಇಂಡಿ ರಸ್ತೆಯಲ್ಲಿರುವ KPMP Trust Bio Medical Waste Disposal Unit ನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಜೂನ್ 26ರಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಈ ವಿಲೇವಾರಿ ಪ್ರಕ್ರಿಯೆ ನಡೆಸಲಾಯಿತು.
ಮಾದಕ ದ್ರವ್ಯಗಳ ಸಾಗಾಣಿಕೆ, ಮಾರಾಟ ಹಾಗೂ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರಂತರ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಯುವಜನತೆ ಮಾದಕ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಅಧಿಕಾರಿಗಳು ಸಾರ್ವಜನಿಕರಲ್ಲಿ ಮಾದಕ ದ್ರವ್ಯಗಳ ವಿರುದ್ಧ ಎಚ್ಚರಿಕೆ ವಹಿಸುವಂತೆ ಹಾಗೂ ಇಂತಹ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ದೊರೆತಲ್ಲಿ ಪೊಲೀಸ ಇಲಾಖೆಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande