
ಹುಬ್ಬಳ್ಳಿ, 26 ಜೂನ್ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿ ವಿದ್ಯಾನಗರದ ಶ್ರೀ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಗೆಳೆಯರ ಬಳಗ ಹಾಗೂ ಶ್ರೀ ರಾಜೇಶ್ವರಿ ಪ್ರಾಪರ್ಟೀಸ್ ಸಹಯೋಗದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರು ಹಾಗೂ ಹೆಸ್ಕಾಂ ಸಿಬ್ಬಂದಿಗಳಿಗೆ ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ನಗರದ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅಮೂಲ್ಯವಾಗಿದೆ ಎಂದು ಹೇಳಿದರು. ಮಳೆ, ಬಿಸಿಲು ಎನ್ನದೆ, ರಜೆ ದಿನಗಳನ್ನೂ ಲೆಕ್ಕಿಸದೆ ನಗರದ ನೈರ್ಮಲ್ಯಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ. ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಹೆಸ್ಕಾಂ ಪವರ್ಮ್ಯಾನ್ಗಳ ಸೇವೆಯನ್ನು ಉಲ್ಲೇಖಿಸಿದ ಅವರು, ಜೀವದ ಹಂಗು ತೊರೆದು ವಿದ್ಯುತ್ ತಂತಿಗಳ ನಡುವೆ ಕಾರ್ಯನಿರ್ವಹಿಸುವ ಪವರ್ಮ್ಯಾನ್ಗಳ ಪರಿಶ್ರಮದಿಂದಲೇ ಮನೆ, ಕಚೇರಿ ಹಾಗೂ ಕೈಗಾರಿಕೆಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿದೆ. ಸಮಾಜದ ಅಭಿವೃದ್ಧಿಗೆ ಅವರು ನೀಡುತ್ತಿರುವ ಕೊಡುಗೆ ಅಪಾರವಾಗಿದ್ದು, ಅವರನ್ನು ಅದೃಶ್ಯ ನಾಯಕರು ಎಂದು ಗೌರವಿಸಬೇಕು ಎಂದು ಹೇಳಿದರು.
ಸಮಾಜದ ಸುಗಮ ಕಾರ್ಯನಿರ್ವಹಣೆಗೆ ಪೌರ ಕಾರ್ಮಿಕರು ಮತ್ತು ಪವರ್ಮ್ಯಾನ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂತಹ ತ್ಯಾಗಮಯ ಸೇವೆ ಸಲ್ಲಿಸುವವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹುಬ್ಬಳ್ಳಿಯ ಮೂರುಸಾವಿರಮಠದ ನಿರಂಜನ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರೆ ಜ್ಯೋತಿ ಪಾಟೀಲ, ಉಪ ಮಹಾಪೌರ ಸಂತೋಷ ಚವ್ಹಾಣ, ಡಾ. ವಿಜಯ ಗುಂಟ್ರಾಳ, ಪಾಲಿಕೆಯ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.