ಸರ್ಕಾರದ ಘನತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ : ಮುಖ್ಯಮಂತ್ರಿ
ನಿಗೆ
Meeting


ಬೆಂಗಳೂರು, 26 ಜೂನ್ (ಹಿ.ಸ.) :

ಆ್ಯಂಕರ್ : ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಘನತೆ ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಂಡರೆ ಸರ್ಕಾರದ ಘನತೆಯೂ ಹೆಚ್ಚುತ್ತದೆ. ಆದರೆ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.

ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಯಾರೂ ಭಾವಿಸಬಾರದು. ಅಗತ್ಯವಿದ್ದರೆ ಅದಕ್ಕೆ ಬೇಕಾದ ಕಾನೂನು ತಿದ್ದುಪಡಿಯನ್ನೂ ತರಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ. ಸರ್ಕಾರದ ಘನತೆಗೆ ಧಕ್ಕೆ ತರುವ ಯಾವುದೇ ನಡೆ ಸಹಿಸಲಾಗುವುದಿಲ್ಲ. ಇಲಾಖೆಯ ಘನತೆ ಉಳಿದರೆ ಸರ್ಕಾರದ ಘನತೆಯೂ ಉಳಿಯುತ್ತದೆ. ವೃತ್ತಿಪರತೆಯಿಂದ ಕೆಲಸ ಮಾಡಿ, ಇಲ್ಲವಾದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲಾಖೆಯಲ್ಲಿ ಹೊಸದಾಗಿ ಜಾರಿಗೊಂಡಿರುವ ಎಐಬಿ (AIB) ವ್ಯವಸ್ಥೆಯಿಂದ ನಿರೀಕ್ಷಿತ ಮಟ್ಟದಲ್ಲಿ ಉತ್ತಮ ಪ್ರಗತಿ ಕಂಡು ಬಂದಿದೆ ಎಂದು ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದರು.

ರಾಜ್ಯದಾದ್ಯಂತ ಹೊಸದಾಗಿ 574 ಮದ್ಯ ಮಾರಾಟ ಸನ್ನದುಗಳನ್ನು ಇ-ಹರಾಜು ಮೂಲಕ ನೀಡಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ಇಲಾಖೆಯ ಆದಾಯ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿದರು.

ಮದ್ಯ ಮಾರಾಟ ಪರವಾನಿಗೆಗಳ ನವೀಕರಣ ಶುಲ್ಕವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಕ್ಕದ ರಾಜ್ಯಗಳ ಅಬಕಾರಿ ಇಲಾಖೆಗಳ ಕಾರ್ಯವೈಖರಿಯನ್ನು ಅಧ್ಯಯನ ಮಾಡಿರುವುದಾಗಿ ತಿಳಿಸಿದ ಮುಖ್ಯಮಂತ್ರಿ, ಕರ್ನಾಟಕಕ್ಕೂ ನಿಗದಿಪಡಿಸಿರುವ ಆದಾಯ ಗುರಿಯನ್ನು ಸಾಧಿಸಲು ಅಧಿಕಾರಿಗಳು ಹೆಚ್ಚಿನ ಬದ್ಧತೆ ಮತ್ತು ಕಾರ್ಯಕ್ಷಮತೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಅಧಿಕಾರಿಗಳು ಇಲಾಖೆಯ ಘನತೆ, ಪಾರದರ್ಶಕತೆ ಮತ್ತು ಸರ್ಕಾರದ ವಿಶ್ವಾಸವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಗೌರವಕ್ಕೆ ಧಕ್ಕೆ ತರುವ ಯಾವುದೇ ಲೋಪ ಅಥವಾ ನಿರ್ಲಕ್ಷ್ಯದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande