ಗದಗ ಜಿಲ್ಲೆಯಲ್ಲಿ ಮೊಹರಂ ಹಬ್ಬದ ಸಂಭ್ರಮ
ಗದಗ, 26 ಜೂನ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಾದ್ಯಂತ ಮೊಹರಂ ಹಬ್ಬದ ಸಂಭ್ರಮ ಮನೆ ಮಾಡಿದ್ದು, ವಿವಿಧ ಗ್ರಾಮಗಳಲ್ಲಿ ಧಾರ್ಮಿಕ ಆಚರಣೆಗಳು ಭಕ್ತಿ, ಶ್ರದ್ಧೆ ಹಾಗೂ ಸೌಹಾರ್ದತೆಯ ವಾತಾವರಣದಲ್ಲಿ ನಡೆಯುತ್ತಿವೆ. ಅದರಲ್ಲೂ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದೂ-ಮ
ಫೋಟೋ


ಗದಗ, 26 ಜೂನ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಾದ್ಯಂತ ಮೊಹರಂ ಹಬ್ಬದ ಸಂಭ್ರಮ ಮನೆ ಮಾಡಿದ್ದು, ವಿವಿಧ ಗ್ರಾಮಗಳಲ್ಲಿ ಧಾರ್ಮಿಕ ಆಚರಣೆಗಳು ಭಕ್ತಿ, ಶ್ರದ್ಧೆ ಹಾಗೂ ಸೌಹಾರ್ದತೆಯ ವಾತಾವರಣದಲ್ಲಿ ನಡೆಯುತ್ತಿವೆ. ಅದರಲ್ಲೂ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಸಮುದಾಯದವರು ಒಗ್ಗಟ್ಟಿನಿಂದ ಆಚರಿಸುವ ಮೂಲಕ ಕೋಮು ಸೌಹಾರ್ದಕ್ಕೆ ಮಾದರಿಯಾಗಿದ್ದಾರೆ.

ಗ್ರಾಮದಲ್ಲಿ ಅಲೆ ದೇವರಗಳ ಅದ್ದೂರಿ ಮೆರವಣಿಗೆ ನಡೆಸಲಾಗಿದ್ದು, ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಸೇರಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಭಕ್ತಿಭಾವದಿಂದ ಹೆಜ್ಜೆ ಮಜಲು ಹಾಗೂ ಮುಳ್ಳ ಗದ್ದೆ ಹೆಜ್ಜೆ ಹಾಕುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು. ಸಂಪ್ರದಾಯಬದ್ಧ ವಾದ್ಯಗಳ ನಾದ, ಧಾರ್ಮಿಕ ಘೋಷಣೆಗಳು ಹಾಗೂ ಭಕ್ತರ ಜಯಘೋಷಗಳಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಉಂಟಾಗಿತ್ತು.

ಮೊಹರಂ ಆಚರಣೆಯಲ್ಲಿ ಕೇವಲ ಮುಸ್ಲಿಂ ಸಮುದಾಯದವರು ಮಾತ್ರವಲ್ಲದೆ ಹಿಂದೂ ಸಮುದಾಯದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಸಾಮರಸ್ಯದ ಸಂದೇಶ ಸಾರಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಯಾವುದೇ ಭೇದಭಾವವಿಲ್ಲದೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು.

ಬಟ್ಟೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಮೊಹರಂ ಹಬ್ಬವನ್ನು ಇದೇ ರೀತಿಯ ಸೌಹಾರ್ದತೆಯೊಂದಿಗೆ ಆಚರಿಸುವ ಸಂಪ್ರದಾಯ ಮುಂದುವರಿದಿದ್ದು, ಈ ಬಾರಿ ಕೂಡ ಎರಡೂ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಒಗ್ಗಟ್ಟಿನಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಭಕ್ತರಿಗೆ ಕುಡಿಯುವ ನೀರು ಹಾಗೂ ಇತರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ಹೆಜ್ಜೆ ಮಜಲು ಹಾಗೂ ಮುಳ್ಳ ಗದ್ದೆ ಹೆಜ್ಜೆಯಂತಹ ಸಂಪ್ರದಾಯಗಳನ್ನು ಭಕ್ತರು ಭಕ್ತಿ ಮತ್ತು ನಂಬಿಕೆಯಿಂದ ಆಚರಿಸಿದ್ದು, ಅಲೆ ದೇವರಗಳ ಮೆರವಣಿಗೆ ಗ್ರಾಮದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಮೆರವಣಿಗೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಸಾಕಷ್ಟು ಜನ ಆಗಮಿಸಿದ್ದರು.

ಮೊಹರಂ ಹಬ್ಬವು ತ್ಯಾಗ, ಸತ್ಯ ಮತ್ತು ಮಾನವೀಯ ಮೌಲ್ಯಗಳ ಸಂಕೇತವಾಗಿದ್ದು, ಬಟ್ಟೂರು ಗ್ರಾಮದಲ್ಲಿ ನಡೆದ ಆಚರಣೆಯು ಧಾರ್ಮಿಕ ಸಾಮರಸ್ಯ, ಪರಸ್ಪರ ಗೌರವ ಹಾಗೂ ರಾಷ್ಟ್ರೀಯ ಐಕ್ಯತೆಯ ಸಂದೇಶವನ್ನು ಮತ್ತೊಮ್ಮೆ ಸಾರಿತು. ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯೇ ಸಮಾಜದ ಶಕ್ತಿಯೆಂಬುದನ್ನು ಈ ಆಚರಣೆ ಸಾಬೀತುಪಡಿಸಿದ್ದು, ಹಿಂದೂ-ಮುಸ್ಲಿಂ ಭಾವೈಕ್ಯದ ಜೀವಂತ ಉದಾಹರಣೆಯಾಗಿ ಬಟ್ಟೂರು ಗ್ರಾಮ ಗಮನ ಸೆಳೆದಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande