ಮುಧೋಳ ಮಹಿಳಾ ಉದ್ಯಮಿಗೆ ₹19.80 ಲಕ್ಷ ವಂಚನೆ ; ಸಗಣಿಯಿಂದ ಕಟ್ಟಿಗೆ ತಯಾರಿಸುವ ಯಂತ್ರದ ಹೆಸರಿನಲ್ಲಿ ಮೋಸದ ಜಾಲ
ಬಾಗಲಕೋಟೆ, 26 ಜೂನ್ (ಹಿ.ಸ.) : ಆಂಕರ್ : ಸಗಣಿಯಿಂದ ಕಟ್ಟಿಗೆ ತಯಾರಿಸುವ ಯಂತ್ರಗಳಿಗೆ ಹೆಚ್ಚಿನ ಬಾಡಿಗೆ ನೀಡುವುದಾಗಿ ನಂಬಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಮಹಿಳಾ ಉದ್ಯಮಿಯೊಬ್ಬರಿಗೆ ಬರೋಬ್ಬರಿ ₹19.80 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮೋಸಕ್ಕೊಳಗಾದ ಮಹಿಳೆ ಮುಧೋಳ ಪೊಲೀಸ
ವಂಚನೆ


ಬಾಗಲಕೋಟೆ, 26 ಜೂನ್ (ಹಿ.ಸ.) :

ಆಂಕರ್ : ಸಗಣಿಯಿಂದ ಕಟ್ಟಿಗೆ ತಯಾರಿಸುವ ಯಂತ್ರಗಳಿಗೆ ಹೆಚ್ಚಿನ ಬಾಡಿಗೆ ನೀಡುವುದಾಗಿ ನಂಬಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಮಹಿಳಾ ಉದ್ಯಮಿಯೊಬ್ಬರಿಗೆ ಬರೋಬ್ಬರಿ ₹19.80 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಮೋಸಕ್ಕೊಳಗಾದ ಮಹಿಳೆ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ದೂರುದಾರ ಮಹಿಳೆಯ ಪರಿಚಯದ ಗೋಕಾಕ ತಾಲೂಕಿನ ರವಿ ಹಿರೇಮಠ ಹಾಗೂ ಕೊಲ್ಹಾಪುರ ಮೂಲದ ರಾಹುಲ್ ಕಾಂಬಳೆ ಎಂಬುವವರು ತಾವು ಜೈವಿಕ ಅನಿಲ ಹಾಗೂ ಜೈವಿಕ ಇಂಧನ ಉತ್ಪಾದನಾ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಬಳಿಕ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದಲ್ಲಿ ತಮ್ಮ ಕಂಪನಿ ಜೈವಿಕ ಇಂಧನ ಉತ್ಪಾದನಾ ಘಟಕ ಆರಂಭಿಸುತ್ತಿದ್ದು, ರೈತರಿಂದ ಸಂಗ್ರಹಿಸಿದ ಸಗಣಿಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಕಟ್ಟಿಗೆಯಾಗಿ ಪರಿವರ್ತಿಸುವ ಯಂತ್ರಗಳನ್ನು ಹೂಡಿಕೆದಾರರಿಗೆ ನೀಡುತ್ತಿರುವುದಾಗಿ ಮಹಿಳಾ ಉದ್ಯಮಿಗೆ ತಿಳಿಸಿದ್ದಾರೆ.

ಒಂದು ಯಂತ್ರಕ್ಕೆ ₹1.65 ಲಕ್ಷ ವೆಚ್ಚವಾಗಲಿದ್ದು, ಹೂಡಿಕೆದಾರರು ಯಂತ್ರಗಳನ್ನು ಖರೀದಿಸಿ ಕಂಪನಿಗೆ ನೀಡಿದರೆ ಪ್ರತಿ ತಿಂಗಳು ಪ್ರತಿ ಯಂತ್ರಕ್ಕೆ ₹14 ಸಾವಿರ ಬಾಡಿಗೆ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದಾರೆ. ಹೆಚ್ಚಿನ ಆದಾಯದ ಆಸೆಯಿಂದ ಮಹಿಳಾ ಉದ್ಯಮಿಯು ಆರೋಪಿಗಳ ಮಾತನ್ನು ನಂಬಿ 12 ಯಂತ್ರಗಳನ್ನು ಖರೀದಿಸಲು ಮುಂದಾಗಿದ್ದಾರೆ.

ಇದರಂತೆ ಆರೋಪಿಗಳು ಕಂಪನಿಯ ಬ್ಯಾಂಕ್ ಖಾತೆ ವಿವರಗಳನ್ನು ನೀಡಿ, ಹಣವನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾರೆ. ಅವರ ಸೂಚನೆಯಂತೆ ಮಹಿಳೆ ತಮ್ಮ ಖಾತೆಯಿಂದ ₹7 ಲಕ್ಷ ಹಾಗೂ ತಮ್ಮ ತಂದೆಯವರಿಂದ ಪಡೆದ ₹12.80 ಲಕ್ಷ ಸೇರಿದಂತೆ ಒಟ್ಟು ₹19.80 ಲಕ್ಷ ಹಣವನ್ನು ಬೆಳಗಾವಿಯ ಸದಾಶಿವನಗರದ ಬ್ಯಾಂಕ್ನಲ್ಲಿರುವ ಕಂಪನಿ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಆದರೆ ಹಣ ಪಡೆದು ಹಲವು ತಿಂಗಳು ಕಳೆದರೂ ಆರೋಪಿಗಳು ಯಾವುದೇ ಜೈವಿಕ ಇಂಧನ ಘಟಕ ಆರಂಭಿಸಿಲ್ಲ. ಅಲ್ಲದೆ ಭರವಸೆ ನೀಡಿದಂತೆ ಸಗಣಿಯಿಂದ ಕಟ್ಟಿಗೆ ತಯಾರಿಸುವ ಯಂತ್ರಗಳನ್ನು ಕೂಡ ಪೂರೈಸಿಲ್ಲ. ಇದರಿಂದ ತಾನು ಮೋಸ ಹೋಗಿರುವುದನ್ನು ಅರಿತ ಮಹಿಳಾ ಉದ್ಯಮಿ ಇದೀಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಪ್ರಕರಣದ ಕುರಿತು ಮುಧೋಳ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಹೂಡಿಕೆ ಹಾಗೂ ಹೆಚ್ಚಿನ ಲಾಭದ ಭರವಸೆ ನೀಡುವ ಅಪರಿಚಿತ ವ್ಯಕ್ತಿಗಳ ಮಾತಿಗೆ ಮರುಳಾಗದೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande