
ವಿಜಯಪುರ, 26 ಜೂನ್ (ಹಿ.ಸ.) :
ಆಂಕರ್ : ಸಾಮಾನ್ಯ ದಿನಗಳಲ್ಲಿ ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದ ರಸ್ತೆಗಳು ಇದೀಗ ಸಚಿವರ ಭೇಟಿ ಹಿನ್ನೆಲೆಯಲ್ಲಿ ಏಕಾಏಕಿ ದುರಸ್ತಿ ಕಾರ್ಯಕ್ಕೆ ಒಳಗಾಗಿವೆ.
ಹೌದು ವಿಜಯಪುರ ಜಿಲ್ಲೆಯ ಸಿಂದಗಿ
ನಗರ ಹಾಗೂ ಪ್ರಮುಖ ಮಾರ್ಗಗಳಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಾತ್ರಿ-ಹಗಲು ಎನ್ನದೆ ರಸ್ತೆ ಕಾಮಗಾರಿಗಳನ್ನು ಕೈಗೊಂಡಿರುವುದು ಸಾರ್ವಜನಿಕರ ಗಮನ ಸೆಳೆದಿದೆ.
ತಿಂಗಳುಗಳ ಕಾಲ ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದರೂ ಸ್ಪಂದಿಸದ ಆಡಳಿತ ವ್ಯವಸ್ಥೆ, ಸಚಿವರ ಪ್ರವಾಸ ಕಾರ್ಯಕ್ರಮ ನಿಗದಿಯಾದ ಬೆನ್ನಲ್ಲೇ ಚುರುಕುಗೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಗುಂಡಿಗಳಿಂದ ಕೂಡಿದ್ದ ರಸ್ತೆಗಳಲ್ಲಿ ಇದೀಗ ತಾತ್ಕಾಲಿಕ ದುರಸ್ತಿ ಕಾರ್ಯಗಳು ನಡೆಯುತ್ತಿದ್ದು, ಸಚಿವರ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಸಚಿವರು ಪ್ರತಿದಿನ ನಗರಕ್ಕೆ ಭೇಟಿ ನೀಡಿದರೆ ನಮ್ಮ ರಸ್ತೆಗಳು ಯಾವಾಗಲೂ ಉತ್ತಮ ಸ್ಥಿತಿಯಲ್ಲಿ ಇರುತ್ತವೆ ಎಂದು ಕೆಲ ಸಾರ್ವಜನಿಕರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಜನರ ದೈನಂದಿನ ಸಂಚಾರಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳತ್ತ ನಿರಂತರ ಗಮನ ಹರಿಸಬೇಕಾಗಿದ್ದು, ಕೇವಲ ಗಣ್ಯರ ಭೇಟಿಯ ಸಂದರ್ಭದಲ್ಲಿ ಮಾತ್ರ ಕಾಮಗಾರಿಗಳಿಗೆ ವೇಗ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ರಸ್ತೆಯ ಗುಂಡಿಗಳು ಸಾಮಾನ್ಯ ಜನರಿಗೆ ಸಮಸ್ಯೆಯಾಗಿದ್ದರೂ, ಅಧಿಕಾರಿಗಳ ಗಮನಕ್ಕೆ ಬರಲು ಸಚಿವರ ಭೇಟಿ ಅಗತ್ಯವಾಗಿರುವ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಹೇಳಿದ್ದಾರೆ.
ಸಚಿವರ ಭೇಟಿ ಮುಗಿದ ನಂತರವೂ ಇದೇ ರೀತಿಯ ವೇಗದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ನಿರ್ವಹಣಾ ಕಾರ್ಯಗಳು ಮುಂದುವರಿಯಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande