
ಮೈಸೂರು, 26 ಜೂನ್ (ಹಿ.ಸ.) :
ಆ್ಯಂಕರ್ : ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಮತ್ತು ಅಕ್ರಮ ಸಾಗಣೆ ದಿನದ ಅಂಗವಾಗಿ ಮೈಸೂರು ನಗರ ಪೊಲೀಸ್ ಇಲಾಖೆಯ ವತಿಯಿಂದ ಶುಕ್ರವಾರ ನಗರದ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬೃಹತ್ ಜಾಗೃತಿ ಜಾಥಾವನ್ನು ಆಯೋಜಿಸಲಾಯಿತು.
ನಗರ ಪೊಲೀಸ್ ಆಯುಕ್ತೆ ಶ್ರೀಮತಿ ಸೀಮಾ ಲಾಟ್ಕರ್, ಅವರ ನೇತೃತ್ವದಲ್ಲಿ ನಡೆದ ಜಾಥಾಕ್ಕೆ ಸ್ಯಾಂಡಲ್ವುಡ್ ನಟ ವಿನಯ್ ರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ನಗರವನ್ನು ಮಾದಕ ದ್ರವ್ಯ ಮುಕ್ತಗೊಳಿಸುವ ಸಂಕಲ್ಪದೊಂದಿಗೆ ನಡೆದ ಈ ಜಾಗೃತಿ ಅಭಿಯಾನದಲ್ಲಿ ನೂರಾರು ವಿದ್ಯಾರ್ಥಿಗಳು, ಯುವಕರು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉತ್ಸಾಹದಿಂದ ಪಾಲ್ಗೊಂಡರು. ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಣೆಯ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಸಂದೇಶಗಳನ್ನು ಸಾರುತ್ತಾ, ಡ್ರಗ್ಸ್ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಕರೆ ನೀಡಲಾಯಿತು.
ಜಾಥಾದಲ್ಲಿ ಪಾಲ್ಗೊಂಡವರು ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ಪೊಲೀಸ್ ಇಲಾಖೆಯೊಂದಿಗೆ ಧ್ವನಿಗೂಡಿಸಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಪ್ರತಿಜ್ಞೆ ಕೈಗೊಂಡರು.
ನಗರದಲ್ಲಿ ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಯುವಜನತೆ ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh.M.B.