
ಗದಗ, 26 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ “ಕನ್ನಡ ನಾಡಿನ ಅನನ್ಯ ಸಾಧಕೀಯರು” ಎಂಬ ವಿಷಯದ ಕುರಿತು ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮವು ಮಹಿಳಾ ಸಾಧನೆಯ ಹಾದಿಯನ್ನು ಸ್ಮರಿಸುವಂತೆ ಸ್ಫೂರ್ತಿದಾಯಕವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಶ್ರೀ ಜಗದ್ಗುರು ವೀರಗಂಗಾಧರ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಸರಸ್ವತಿ ಹುಲ್ಲಣ್ಣವರ ಅವರು, ಕನ್ನಡ ನಾಡು ಕಲೆ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಸಮಾಜಸೇವೆ, ಆಡಳಿತ, ರಾಜಕೀಯ ಹಾಗೂ ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಮಹಿಳೆಯರನ್ನು ಕಂಡಿದೆ ಎಂದು ಹೇಳಿದರು. ಅವರ ಪ್ರತಿಭೆ, ಪರಿಶ್ರಮ ಹಾಗೂ ಸಮಾಜಮುಖಿ ಚಿಂತನೆ ಕನ್ನಡದ ಕೀರ್ತಿಯನ್ನು ದೇಶ ವಿದೇಶಗಳಿಗೆ ಪಸರಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಫ್ಟ್ವೇರ್ ಇಂಜಿನಿಯರಿಂಗ್ ಕ್ಷೇತ್ರದಿಂದ ಕೃಷಿ ಉದ್ಯಮಿಯಾಗಿ ಹೊರಹೊಮ್ಮಿ ಬಂಜರು ಭೂಮಿಯನ್ನು ಹನಿ ನೀರಾವರಿ ಹಾಗೂ ಸಾವಯವ ಕೃಷಿಯ ಮೂಲಕ ಸಮೃದ್ಧ ತೋಟವನ್ನಾಗಿ ರೂಪಿಸಿದ ಕವಿತಾ ಮಿಶ್ರಾ, ಪೊಲೀಸ್ ಆಡಳಿತ ಕ್ಷೇತ್ರದಲ್ಲಿ ವಿಶಿಷ್ಟ ಗುರುತು ಮೂಡಿಸಿದ ಡಿ. ರೂಪಾ, ಸಾಹಿತ್ಯ ಕ್ಷೇತ್ರದಲ್ಲಿ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್, ಹಾಗು ಸುಧಾ ಮೂರ್ತಿ ಅವರಂತಹ ವ್ಯಕ್ತಿತ್ವಗಳು ಮಹಿಳಾ ಸಾಮರ್ಥ್ಯದ ಜೀವಂತ ಉದಾಹರಣೆಗಳಾಗಿವೆ ಎಂದು ಅವರು ವಿವರಿಸಿದರು. ಜೊತೆಗೆ ಪರಿಸರ ಸಂರಕ್ಷಣೆಯಲ್ಲಿ ಅಪಾರ ಕೊಡುಗೆ ನೀಡಿದ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿ ಗೌಡ ಅವರ ಸೇವೆಯನ್ನು ವಿಶೇಷವಾಗಿ ಸ್ಮರಿಸಿದರು.
“ಮಹಿಳೆಯರ ಸಾಧನೆಯ ಹಿಂದೆ ಆತ್ಮವಿಶ್ವಾಸ, ಪರಿಶ್ರಮ ಮತ್ತು ಸಮಾಜದ ಬಗ್ಗೆ ಕಾಳಜಿ ಅಡಗಿರುತ್ತದೆ. ಅವರ ಯಶಸ್ಸು ಇಡೀ ಸಮಾಜಕ್ಕೆ ಪ್ರೇರಣೆ ನೀಡುತ್ತದೆ” ಎಂದು ಸರಸ್ವತಿ ಹುಲ್ಲಣ್ಣವರ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯಿನಿ ಶಕುಂತಲಾ ಅಳಗವಾಡಿ ಮಾತನಾಡಿ, ರಾಜಕೀಯ, ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಸಂಗೀತ, ನೃತ್ಯ, ಕ್ರೀಡೆ ಹಾಗೂ ರಂಗಭೂಮಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡ ನಾಡಿನ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾಂಚನಮಾಲಾ ಹಸರೆಡ್ಡಿ, ಅರುಂಧತಿ ಬಿಂಕದಕಟ್ಟಿ ಹಾಗೂ ನಿವೃತ್ತ ಶಿಕ್ಷಕಿ ಸುವರ್ಣ ಹಿರೇಮಠ ಭಾಗವಹಿಸಿ ಕನ್ನಡ ಮಹಿಳೆಯರ ಸಾಧನೆಯನ್ನು ಸ್ಮರಿಸಿದರು.
ವೇದಿಕೆಯ ಅಧ್ಯಕ್ಷೆ ಲಲಿತಾ ಕೆರಿಮನಿ, ಕಾರ್ಯದರ್ಶಿ ನಿರ್ಮಲಾ ಅರಳಿ, ದೇವಕ್ಕ ಪಾಟೀಲ, ರತ್ನಾ ಕರ್ಕಿ, ನೀಲಕ್ಕ ಬೂದಿಹಾಳ, ಸಾವಿತ್ರಿಬಾಯಿ ಗುಡಗೇರಿ, ಮಹಾನಂದ ಕೊಣ್ಣೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗಾಯತ್ರಿ ಅಂಗಡಿ, ಪಾರ್ವತಿ ಕಳ್ಳಿಮಠ, ನಂದಿನಿ ಮಾಳವಾಡ, ಚಿತ್ರಾ ಯಾಳಗಿ ಹಾಗೂ ನಾಗರತ್ನ ಬುರುಡಿ ಕಾರ್ಯಕ್ರಮವನ್ನು ಸಮರ್ಥವಾಗಿ ನಿರ್ವಹಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP