ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ; ನ್ಯಾಯಾಂಗ ತನಿಖೆಗೆ ಅಶೋಕ್ ಆಗ್ರಹ
ನಿಗೆ
ಅಶೋಕ


ಬೆಂಗಳೂರು, 26 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರದ ವಿರುದ್ಧ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿಯೊಂದು ಇಲಾಖೆಯೂ ಭ್ರಷ್ಟಾಚಾರದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದಾರೆ.

ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ದಾಳಿಯಲ್ಲಿ ಅಬಕಾರಿ ಇಲಾಖೆಯಲ್ಲಿ ಸಂಘಟಿತ ಲಂಚದ ಸಿಂಡಿಕೇಟ್ ಕಾರ್ಯ ನಿರ್ವಹಿಸುತ್ತಿರುವುದು ಬಹಿರಂಗವಾಗಿದೆ ಎಂದು ಹೇಳಿರುವ ಅಶೋಕ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಸಂಬಂಧಿ ಹಾಗೂ ಬೆಳಗಾವಿ ವಿಭಾಗದ ಹೆಚ್ಚುವರಿ ಅಬಕಾರಿ ಆಯುಕ್ತ ವೈ.ಡಿ. ಮಂಜುನಾಥ್ ಸೇರಿದಂತೆ ಕೆಲವರ ಬಳಿ ₹13.3 ಕೋಟಿ ಮೌಲ್ಯದ ನಗದು ಮತ್ತು ಚಿನ್ನ ಪತ್ತೆಯಾಗಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ಲಂಚದ ಹಣದ ವಸೂಲಿ ಮತ್ತು ಹಂಚಿಕೆಯ ವಿವರಗಳಿರುವ ರಹಸ್ಯ ದಾಖಲೆ ಇ.ಡಿ. ಅಧಿಕಾರಿಗಳ ಕೈಗೆ ಸಿಕ್ಕಿದೆ ಎಂದು ಹೇಳಿರುವ ಅವರು, ಅಧಿಕಾರಿಗಳು ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಹೆಸರಿನಲ್ಲಿ ಬೇನಾಮಿ ಬಾರ್ ಪರವಾನಿಗೆ ಪಡೆದು ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದ 14 ಸ್ಥಳಗಳಲ್ಲಿ ಇ.ಡಿ. ಏಕಕಾಲಕ್ಕೆ ದಾಳಿ ನಡೆಸಿರುವುದನ್ನು ಉಲ್ಲೇಖಿಸಿರುವ ಅಶೋಕ್, ಈ ಪ್ರಕರಣದಲ್ಲಿ ಉನ್ನತ ಮಟ್ಟದ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಗೆ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಆರೋಪ ಕೇಳಿ ಬಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande