‘ಆಂಟಿಸಿಪೇಟರಿ ಟ್ಯಾಕ್ಸ್’ ಪ್ರಸ್ತಾವನೆ ಜನವಿರೋಧಿ : ಆರ್. ಅಶೋಕ್ ಟೀಕೆ
ಬೆಂಗಳೂರು, 26 ಜೂನ್ (ಹಿ.ಸ.) : ಆ್ಯಂಕರ್ : ಹಳೆಯ ಮದ್ರಾಸ್ ರಸ್ತೆ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾವನೆ ಕುರಿತು ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸನಲ್
ಅಶೋಕ


ಬೆಂಗಳೂರು, 26 ಜೂನ್ (ಹಿ.ಸ.) :

ಆ್ಯಂಕರ್ : ಹಳೆಯ ಮದ್ರಾಸ್ ರಸ್ತೆ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾವನೆ ಕುರಿತು ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಟೀಕಿಸಿರುವ ಅಶೋಕ್, ಇದು ಆಂಟಿಸಿಪೇಟರಿ ಟ್ಯಾಕ್ಸ್ (ಭವಿಷ್ಯದಲ್ಲಿ ಆಗಬಹುದಾದ ಲಾಭದ ಮೇಲೆ ಮುಂಗಡ ತೆರಿಗೆ) ಎಂಬ ಹೊಸ ಆರ್ಥಿಕ ಸಿದ್ಧಾಂತ ಎಂದು ವ್ಯಂಗ್ಯವಾಡಿದ್ದಾರೆ.

ಹಳೆಯ ಮದ್ರಾಸ್ ರಸ್ತೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸುಮಾರು ₹1,300 ಕೋಟಿ ವೆಚ್ಚವಾಗಲಿದ್ದು, ರಸ್ತೆ ನಿರ್ಮಾಣದ ಬಳಿಕ ಆಸ್ತಿಗಳ ಮೌಲ್ಯ ಮತ್ತು ವ್ಯಾಪಾರ ವಹಿವಾಟು ಹೆಚ್ಚಾಗಬಹುದು ಎಂಬ ಕಾರಣ ನೀಡಿ ಈಗಲೇ ಹೆಚ್ಚಿನ ಆಸ್ತಿ ತೆರಿಗೆ ವಿಧಿಸುವ ಪ್ರಸ್ತಾವನೆ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಇನ್ನೂ ಯಾವುದೇ ಆದಾಯ ಅಥವಾ ಲಾಭವಾಗುವ ಮುನ್ನವೇ ತೆರಿಗೆ ವಿಧಿಸುವುದು ಜನರ ಮೇಲೆ ಅನಗತ್ಯ ಹೊರೆ ಹೊರಿಸುವ ಕ್ರಮವಾಗಿದ್ದು, ಇದು ಸರ್ಕಾರದ ಆಡಳಿತ ವೈಫಲ್ಯವನ್ನು ಜನರ ಮೇಲೆ ಹೊರಿಸುವ ಪ್ರಯತ್ನ ಎಂದು ಅಶೋಕ್ ಆರೋಪಿಸಿದ್ದಾರೆ.

ಇಂದಿರಾನಗರ, ಎಚ್ಎಎಲ್ ರಸ್ತೆ, ದೊಮ್ಮಲೂರು, ಮಡಿವಾಳ, ಹೊಸೂರು ರಸ್ತೆ ಹಾಗೂ ಸಿಎಂಎಚ್ ರಸ್ತೆ ಭಾಗದ ನಿವಾಸಿಗಳು ಮತ್ತು ವ್ಯಾಪಾರಿಗಳ ಮೇಲೆ ಈ ಕ್ರಮದಿಂದ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಸರ್ಕಾರ ಈ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿರುವ ಅಶೋಕ್, ಈ ತೆರಿಗೆಯ ಪ್ರಮಾಣ, ಜಾರಿಗೆ ಬರುವ ಸಮಯ ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗಿದೆಯೇ ಎಂಬುದರ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande