ವೀರೇಶ್ವರ ಪುಣ್ಯಾಶ್ರಮದಲ್ಲಿ ಆಡಳಿತ ವೈಫಲ್ಯ ಆರೋಪ ; ಟ್ರಸ್ಟಿ ವಸಂತಗೌಡ ಪೊಲೀಸಪಾಟೀಲ ಅಸಮಾಧಾನ
ಗದಗ, 26 ಜೂನ್ (ಹಿ.ಸ.) : ಆ್ಯಂಕರ್ : ಗದಗ ನಗರದ ವೀರೇಶ್ವರ ಪುಣ್ಯಾಶ್ರಮದ ಆಡಳಿತದಲ್ಲಿ ಟ್ರಸ್ಟಿಗಳಿಗೆ ಸೂಕ್ತ ಗೌರವ ಮತ್ತು ಅಧಿಕಾರ ಸಿಗುತ್ತಿಲ್ಲ ಎಂದು ಆರೋಪಿಸಿರುವ ಟ್ರಸ್ಟಿ ವಸಂತಗೌಡ ಪೊಲೀಸಪಾಟೀಲ, ಆಶ್ರಮದ ವ್ಯವಸ್ಥಾಪಕರ ಮಾತೇ ಅಂತಿಮ ನಿರ್ಧಾರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗ
ಫೋಟೋ


ಗದಗ, 26 ಜೂನ್ (ಹಿ.ಸ.) :

ಆ್ಯಂಕರ್ : ಗದಗ ನಗರದ ವೀರೇಶ್ವರ ಪುಣ್ಯಾಶ್ರಮದ ಆಡಳಿತದಲ್ಲಿ ಟ್ರಸ್ಟಿಗಳಿಗೆ ಸೂಕ್ತ ಗೌರವ ಮತ್ತು ಅಧಿಕಾರ ಸಿಗುತ್ತಿಲ್ಲ ಎಂದು ಆರೋಪಿಸಿರುವ ಟ್ರಸ್ಟಿ ವಸಂತಗೌಡ ಪೊಲೀಸಪಾಟೀಲ, ಆಶ್ರಮದ ವ್ಯವಸ್ಥಾಪಕರ ಮಾತೇ ಅಂತಿಮ ನಿರ್ಧಾರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶ್ರಮದ ಆಡಳಿತದ ಕುರಿತು ಪ್ರಶ್ನೆ ಎತ್ತಿದ್ದ ಕಾರಣಕ್ಕೆ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ದೂರಿದರು. ತಮ್ಮಿಂದ ಜೀವಭಯವಿದೆ ಎಂದು ಪೀಠಾಧ್ಯಕ್ಷ ಕಲ್ಲಯ್ಯಜ್ಜನವರು ನೀಡಿರುವ ಹೇಳಿಕೆ ತಮಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದರು.

1984ರಿಂದ ವೀರೇಶ್ವರ ಪುಣ್ಯಾಶ್ರಮದ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಶ್ರೀಗಳ ಬಗ್ಗೆ ಈಗಲೂ ಅಪಾರ ಗೌರವವಿದೆ. ಆಶ್ರಮದ ಆಡಳಿತದಲ್ಲಿ ಕಂಡುಬಂದ ಕೆಲ ಲೋಪಗಳ ಬಗ್ಗೆ ಹಲವು ಬಾರಿ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಳೆದ ಕೆಲವು ವರ್ಷಗಳಿಂದ ಟ್ರಸ್ಟ್ ಸಭೆಯನ್ನೇ ನಡೆಸಿಲ್ಲ. ಸಾರ್ವಜನಿಕವಾಗಿ ಆರೋಪ ಮಾಡುವ ಬದಲು ಶ್ರೀಗಳು ನನ್ನನ್ನು ಕರೆದು ಚರ್ಚೆ ನಡೆಸಿದ್ದರೆ ಸಮಸ್ಯೆ ಬಗೆಹರಿಯಬಹುದಿತ್ತು ಎಂದು ಹೇಳಿದರು.

ಆಶ್ರಮಕ್ಕೆ ದಾನಿಗಳು ನೀಡಿದ ಧಾನ್ಯಗಳಲ್ಲಿ ಹೆಚ್ಚುವರಿಯಾಗಿದ್ದನ್ನು ತಮಗೆ ನೀಡಿ, ಅದನ್ನು ಮಾರಾಟ ಮಾಡಿ ಬಂದ ಹಣವನ್ನು ಆಶ್ರಮಕ್ಕೆ ಸಲ್ಲಿಸುತ್ತಿದ್ದೆ. ಆದರೆ ಕಳೆದ ಮೂರು ವರ್ಷಗಳಿಂದ ಈ ವ್ಯವಸ್ಥೆ ಸ್ಥಗಿತಗೊಂಡಿದೆ. ಈ ಕುರಿತು ತಾವು ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೂ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವುದರಿಂದ ಆಶ್ರಮಕ್ಕೆ ತೆರಳುವುದನ್ನೇ ಕಡಿಮೆ ಮಾಡಿದ್ದೇನೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರು ಹಿರೇಮಠ, ವೀರೇಶ್ವರ ಪುಣ್ಯಾಶ್ರಮವು ಮಾನವೀಯ ಮೌಲ್ಯಗಳನ್ನು ಸಾರುವ ರಾಷ್ಟ್ರಮಟ್ಟದ ಧಾರ್ಮಿಕ ಸಂಸ್ಥೆಯಾಗಿದ್ದು, ಭಕ್ತರು ದಾನವಾಗಿ ನೀಡುವ ವಸ್ತುಗಳ ಮೇಲೆ ಅವರ ಹೆಸರನ್ನು ನಮೂದಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ ಎಂದು ಹೇಳಿದರು.

ತೇರಿನ ಗಾಲಿಯ ಮೇಲೆ ಅನ್ಯ ಕೋಮಿನ ಮಹಿಳೆಯ ಹೆಸರು ಇದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ. ಕೆಲವೇ ದಿನಗಳಲ್ಲಿ ಜಾತ್ರೆ ನಡೆಯಲಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಎಲ್ಲರೂ ಸಹಕರಿಸಬೇಕು. ಜಾತ್ರೆ ಮುಗಿದ ಬಳಿಕ ಈ ವಿಷಯದ ಕುರಿತು ಚರ್ಚೆ ನಡೆಸಿದರೆ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಎಂ.ಆರ್. ಹಿರೇಮಠ, ಚನ್ನಬಸಯ್ಯ ಬಂಕಾಪುರಮಠ, ಸಂಗಮೇಶ ಹಾಗೂ ಪರಶುರಾಮ ಕಟ್ಟಿಮನಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande