ಪ್ರಾಮಾಣಿಕ ತೆರಿಗೆದಾರರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಿ : ಮುಖ್ಯಮಂತ್ರಿ
ಬೆಂಗಳೂರು, 26 ಜೂನ್ (ಹಿ.ಸ.) : ಆ್ಯಂಕರ್ : ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಸರ್ಕಾರದ ಆರ್ಥಿಕ ಶಕ್ತಿಯಾಗಿದ್ದು, ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿರುವ ತೆರಿಗೆ ಸಂಗ್ರಹ ಗುರಿಯನ್ನು ಮೀರಿ ಸಾಧನೆ ಮಾಡುವ ಸಾಮರ್ಥ್ಯ ಇಲಾಖೆಗೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ವಿ
Tax meeting


ಬೆಂಗಳೂರು, 26 ಜೂನ್ (ಹಿ.ಸ.) :

ಆ್ಯಂಕರ್ : ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಸರ್ಕಾರದ ಆರ್ಥಿಕ ಶಕ್ತಿಯಾಗಿದ್ದು, ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿರುವ ತೆರಿಗೆ ಸಂಗ್ರಹ ಗುರಿಯನ್ನು ಮೀರಿ ಸಾಧನೆ ಮಾಡುವ ಸಾಮರ್ಥ್ಯ ಇಲಾಖೆಗೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನ ಸೌಧದಲ್ಲಿ ಶುಕ್ರವಾರ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಸರಕು ಸಾಗಣೆ ವಾಹನವು ಸೂಕ್ತ ದಾಖಲೆಗಳಿಲ್ಲದೆ ಚೆಕ್ಪೋಸ್ಟ್ ಅಥವಾ ರಾಜ್ಯದ ಗಡಿಯನ್ನು ದಾಟದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತೆರಿಗೆ ಸೋರಿಕೆಗೆ ಯಾವುದೇ ಅವಕಾಶ ಇರಬಾರದು. ಅಧಿಕಾರಿಗಳ ಕಾರ್ಯನಿರ್ವಹಣೆ ಕುರಿತು ರಾಜ್ಯದ ಎಲ್ಲ ಭಾಗಗಳಿಂದ ಮಾಹಿತಿ ಬರುತ್ತಿದ್ದು, ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪಕ್ಕದ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ, ಮಾಹಿತಿ ಹಂಚಿಕೆ ಮತ್ತು ಜಂಟಿ ಕಾರ್ಯಾಚರಣೆಗಳ ಮೂಲಕ ತೆರಿಗೆ ವಂಚನೆಯನ್ನು ಪರಿಣಾಮಕಾರಿಯಾಗಿ ತಡೆಯಬೇಕು ಎಂದು ನಿರ್ದೇಶಿಸಿದರು.

ರಾಜ್ಯದಲ್ಲಿ ಸುಮಾರು 12 ಲಕ್ಷ ತೆರಿಗೆದಾರರ ಮಾಹಿತಿಯಿದ್ದು, ತಂತ್ರಜ್ಞಾನ ಹಾಗೂ ಡೇಟಾ ಅನಾಲಿಟಿಕ್ಸ್ ಬಳಸಿ 360 ಡಿಗ್ರಿ ವಿಶ್ಲೇಷಣೆ ನಡೆಸುವ ಮೂಲಕ ತೆರಿಗೆ ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ ಎಂದು ಹೇಳಿದರು.

ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ತೆರಿಗೆ ಪಾವತಿಸುವ ಪ್ರತಿಯೊಬ್ಬ ನಾಗರಿಕನನ್ನು ಗೌರವದಿಂದ ನಡೆಸಿಕೊಳ್ಳಬೇಕು. ಆದರೆ ತೆರಿಗೆ ವಂಚನೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.

ಮುಂದಿನ ಪರಿಶೀಲನಾ ಸಭೆಯ ವೇಳೆಗೆ ಇಂದು ನೀಡಿರುವ ಎಲ್ಲಾ ಸೂಚನೆಗಳು ಅನುಷ್ಠಾನಗೊಂಡಿರಬೇಕು. ಅಧಿಕಾರಿಗಳ ಕಾರ್ಯಕ್ಷಮತೆಯನ್ನು ನೈಜ ಉದಾಹರಣೆಗಳೊಂದಿಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಜಿಎಸ್ಟಿ ಸಂಗ್ರಹದಲ್ಲಿ ಉತ್ತಮ ಸಾಧನೆ

ರಾಜ್ಯದಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಶೇ.9ರಷ್ಟು ಬೆಳವಣಿಗೆ ದಾಖಲಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಗುಜರಾತ್, ತಮಿಳುನಾಡು ಹಾಗೂ ಹರಿಯಾಣ ರಾಜ್ಯಗಳಿಗಿಂತ ಕರ್ನಾಟಕ ಉತ್ತಮ ಸಾಧನೆ ಮಾಡಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೇರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬೋಗಸ್ ಕಂಪನಿಗಳ ವಿರುದ್ಧ ಕಠಿಣ ಕ್ರಮ

ಹೈದರಾಬಾದ್ ಐಐಟಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಜಿಎಸ್ಟಿ ಅನಾಲಿಟಿಕಲ್ ಪೋರ್ಟಲ್ ಮೂಲಕ ತೆರಿಗೆ ವಂಚನೆ ಮೇಲೆ ನಿಗಾ ವಹಿಸಲಾಗುತ್ತಿದೆ. ನಕಲಿ ಬಿಲ್ ಹಾಗೂ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪ್ರಕರಣಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಇನ್ನಷ್ಟು ಬಲಪಡಿಸುವಂತೆ ಸೂಚಿಸಿದರು.

ಬೋಗಸ್ ಕಂಪನಿಗಳನ್ನು ಪತ್ತೆಹಚ್ಚಿ ಇದುವರೆಗೆ ₹166 ಕೋಟಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇಂತಹ ಕಂಪನಿಗಳನ್ನು ಸ್ಥಾಪಿಸಿದವರ ವಿರುದ್ಧ ಬಂಧನ ಸೇರಿದಂತೆ ಕಾನೂನು ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ಮೈಸೂರು ವಿಭಾಗದ ಕಾರ್ಯಕ್ಷಮತೆ ಕುರಿತು ಅಸಮಾಧಾನ

ಮೈಸೂರು ವಿಭಾಗದಲ್ಲಿ ಕಾರ್ಯಕ್ಷಮತೆ ಕುಸಿದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ, ನೆಪ ಅಥವಾ ಕಾರಣಗಳನ್ನು ನೀಡುವುದಕ್ಕಿಂತ ಫಲಿತಾಂಶ ಮುಖ್ಯವಾಗಿದ್ದು, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಉತ್ತಮ ಸಾಧನೆ ತೋರಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತೆರಿಗೆದಾರ ಸ್ನೇಹಿ ವ್ಯವಸ್ಥೆಗೆ ಒತ್ತು

ತೆರಿಗೆದಾರರು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲದಂತೆ, ಆನ್ಲೈನ್ನಲ್ಲಿಯೇ ಸಲಹೆ, ಸಹಕಾರ ಹಾಗೂ ತೆರಿಗೆ ಸಂಬಂಧಿತ ಗೊಂದಲಗಳಿಗೆ ತ್ವರಿತ ಪರಿಹಾರ ನೀಡುವ ನಾಗರಿಕ ಸ್ನೇಹಿ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸೂಚಿಸಿದರು.

ಬಾಕಿ ಇರುವ ಮೇಲ್ಮನವಿಗಳ ವಿಲೇವಾರಿಯನ್ನು ತ್ವರಿತಗೊಳಿಸುವ ಜೊತೆಗೆ, ತೆರಿಗೆದಾರ ಸ್ನೇಹಿ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮತ್ತು ಪಾರದರ್ಶಕಗೊಳಿಸಲು ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande