
ಬಾಗಲಕೋಟೆ, 26 ಜೂನ್ (ಹಿ.ಸ.) :
ಆಂಕರ್ : ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (2025–26) ಅಡಿಯಲ್ಲಿ ಬಾಗಲಕೋಟೆ ಮತಕ್ಷೇತ್ರದಲ್ಲಿ ₹7.20 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗಳಿಗೆ ಶಾಸಕ ಉಮೇಶ್ ಎಚ್. ಮೇಟಿ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಹಲವು ಪ್ರಮುಖ ರಸ್ತೆ ಕಾಮಗಾರಿಗಳು ಆರಂಭವಾಗುತ್ತಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸುವ ನಿರೀಕ್ಷೆ ಮೂಡಿದೆ.
ಯೋಜನೆಯಡಿ ಕಿರಸೂರ–ಮುಗಳೊಳ್ಳಿ ರಸ್ತೆ, ಮುಚಖಂಡಿ ಕ್ರಾಸ್ನಿಂದ ಬಸವೇಶ್ವರ ಸರ್ಕಲ್ವರೆಗೆ ರಸ್ತೆ, ಸಿಕ್ಕೇರಿ ಕೆ.ಎಚ್.ಬಿ. ಬಡಾವಣೆಯ ಆಂತರಿಕ ರಸ್ತೆಗಳು, ಕಮಗತಿ ಹಾಗೂ ಶಿರೂರ ಗ್ರಾಮದ ಸಂಪರ್ಕ ರಸ್ತೆಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗುತ್ತಿದೆ.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಉಮೇಶ್ ಎಚ್. ಮೇಟಿ ಅವರು, ಉತ್ತಮ ರಸ್ತೆ ವ್ಯವಸ್ಥೆ ಅಭಿವೃದ್ಧಿಯ ಪ್ರಮುಖ ಆಧಾರವಾಗಿದೆ ಎಂದು ಹೇಳಿದರು. ರೈತರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸುಗಮವಾಗಿ ಸಂಚರಿಸಲು ಗುಣಮಟ್ಟದ ರಸ್ತೆ ನಿರ್ಮಾಣ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ರಸ್ತೆ ಮೂಲಸೌಕರ್ಯ ಬಲಪಡಿಸಲು ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆರಂಭವಾಗಿರುವ ಎಲ್ಲಾ ಕಾಮಗಾರಿಗಳು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಕಾಮಗಾರಿಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.
ಬಾಗಲಕೋಟೆ ಮತಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿದ್ದು, ಜನರ ವಿಶ್ವಾಸ ಮತ್ತು ಸಹಕಾರವೇ ಮತ್ತಷ್ಟು ಅಭಿವೃದ್ಧಿ ಕೆಲಸಗಳಿಗೆ ಪ್ರೇರಣೆಯಾಗಿದೆ ಎಂದು ಶಾಸಕ ಉಮೇಶ್ ಎಚ್. ಮೇಟಿ ಹೇಳಿದರು.
ಕ್ಷೇತ್ರದ ಹಲವು ಗ್ರಾಮಗಳು ಹಾಗೂ ನಗರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಂಚಾರ ವ್ಯವಸ್ಥೆ ಸುಧಾರಿಸುವುದರ ಜೊತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande