ರೈಲು ಸೇವೆಗಳ ಪುನಾರಂಭಕ್ಕೆ ಆಗ್ರಹ ; ಪ್ರತಿಭಟನಾಕಾರರು–ಪೊಲೀಸರ ನಡುವೆ ವಾಗ್ವಾದ
ಉಂಟಾಗಿದೆ
Protest


ಬಾಗಲಕೋಟೆ, 25 ಜೂನ್ (ಹಿ.ಸ.) :

ಆಂಕರ್ : ಗೋಲಗುಂಬಜ್ ಸೇರಿದಂತೆ ಪ್ರಮುಖ ರೈಲುಗಳ ಸಂಚಾರವನ್ನು ಮೊದಲಿನಂತೆ ಪುನರಾರಂಭಿಸಬೇಕು ಹಾಗೂ ಬಾಗಲಕೋಟೆ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಬಾಗಲಕೋಟೆ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲು ಮುಂದಾದರು.

ಪ್ರತಿಭಟನೆಗೆ ಮುಂದಾದ ಹೋರಾಟಗಾರರನ್ನು ಪೊಲೀಸರು ತಡೆಯಲು ಯತ್ನಿಸಿದ ವೇಳೆ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಯಿತು.

ಪ್ರತಿಭಟನಾಕಾರರು ತಮ್ಮ ಹಕ್ಕಿನಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪೊಲೀಸರು ಅನುಮತಿ ಹಾಗೂ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ತಡೆಯಲು ಮುಂದಾದರು. ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು.

ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು, ಬಾಗಲಕೋಟೆ ಜಿಲ್ಲೆಗೆ ರೈಲ್ವೆ ಸಂಪರ್ಕದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಸ್ಥಗಿತಗೊಂಡಿರುವ ಹಾಗೂ ಕಡಿತಗೊಳಿಸಿರುವ ರೈಲು ಸೇವೆಗಳನ್ನು ಪುನಃ ಆರಂಭಿಸಬೇಕು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈಲ್ವೆ ನಿಲ್ದಾಣದ ಅಭಿವೃದ್ಧಿ, ಮೂಲಸೌಕರ್ಯಗಳ ಹೆಚ್ಚಳ ಹಾಗೂ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಇಲಾಖೆ ಗಮನ ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪೊಲೀಸರು ಹಾಗೂ ಹೋರಾಟಗಾರರ ನಡುವೆ ನಡೆದ ಮಾತಿನ ಚಕಮಕಿಯ ಬಳಿಕ ಪರಿಸ್ಥಿತಿ ತಿಳಿಗೊಂಡಿತು. ತಮ್ಮ ಬೇಡಿಕೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೋರಾಟಗಾರರು ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಸರ್ಕಾರ ಹಾಗೂ ರೈಲ್ವೆ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ಹೋರಾಟ ಸಮಿತಿಯ ಪ್ರಮುಖ ಬೇಡಿಕೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande