
ವಿಜಯಪುರ, 25 ಜೂನ್ (ಹಿ.ಸ.) :
ಆಂಕರ್ : ಧರ್ಮದ ಗಡಿಗಳನ್ನು ಮೀರಿ ಮಾನವೀಯತೆ, ಭಾವೈಕ್ಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಮೊಹರಂ ಹಬ್ಬವು ವಿಜಯಪುರ ನಗರದ ಜೋರಪುರ ಪೇಟೆ ಹಾಗೂ ಬಬಲೇಶ್ವರ ನಾಕಾ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ಒಗ್ಗಟ್ಟಿನ ಆಚರಣೆಯಾಗಿ ಗಮನ ಸೆಳೆಯುತ್ತಿದೆ.
ಏಳನೇ ಶತಮಾನದಲ್ಲಿ ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್ ಹಾಗೂ ಅವರ ಸಂಗಡಿಗರು ಯಜೀದ್ ವಿರುದ್ಧ ಕರ್ಬಲಾ ಮೈದಾನದಲ್ಲಿ ಹೋರಾಡಿ ಹುತಾತ್ಮರಾದ ಘಟನೆಯ ಸ್ಮರಣಾರ್ಥ ಮೊಹರಂ ಆಚರಣೆ ಆರಂಭವಾಯಿತು. ಕರ್ಬಲಾ ಕದನದಲ್ಲಿ ಹುಸೇನ್ ಹಾಗೂ ಅವರ ಅನುಯಾಯಿಗಳು ಎದುರಿಸಿದ ಸಂಕಷ್ಟ, ತ್ಯಾಗ ಮತ್ತು ಮಾನವೀಯ ಮೌಲ್ಯಗಳ ನೆನಪಾಗಿ ಈ ಆಚರಣೆ ರೂಪುಗೊಂಡಿತು.
ಕರ್ನಾಟಕದಲ್ಲಿ ಮೊಹರಂ ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ, ಜನಪದ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಎಲ್ಲ ಧರ್ಮ, ಜಾತಿಯ ಜನರು ಒಟ್ಟಾಗಿ ಆಚರಿಸುವ ಊರ ಹಬ್ಬದ ರೂಪ ಪಡೆದಿದೆ. ಮುಸ್ಲಿಂ ಸಮುದಾಯದವರ ಸಂಖ್ಯೆ ಕಡಿಮೆ ಇರುವ ಅನೇಕ ಗ್ರಾಮಗಳಲ್ಲಿಯೂ ಮೊಹರಂ ಆಚರಣೆ ನಡೆಯುತ್ತಿರುವುದು ಇದರ ವೈಶಿಷ್ಟ್ಯವಾಗಿದೆ.
ಮೊಹರಂ ಆಚರಣೆಯಲ್ಲಿ ಶೋಕಗೀತೆಗಳು, ಹಾಡಿಕೆ, ಕುಣಿತ, ವೇಷಗಾರಿಕೆ, ಮೆರವಣಿಗೆ ಹಾಗೂ ವಿಶೇಷ ಆಹಾರ ಪದ್ಧತಿಗಳು ಪ್ರಮುಖ ಸ್ಥಾನ ಪಡೆದಿವೆ. ಹುಲಿವೇಷ, ಕೋಡಂಗಿ ಕುಣಿತ, ಹೆಜ್ಜೆ ಕುಣಿತ, ಅಚೊಳ್ಳಿ-ಬಿಚೊಳ್ಳಿ ಸೋಗು, ಭಡಂಗ್ ವೇಷ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳು ಈ ಹಬ್ಬದೊಂದಿಗೆ ಬೆಸೆದುಕೊಂಡಿವೆ.
ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಮೊಹರಂ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಅನೇಕ ಕುಟುಂಬಗಳು ಫಕೀರರನ್ನು ಕರೆದು ಬಿನ್ನಹ ಮಾಡಿಸುವ ಸಂಪ್ರದಾಯ ಪಾಲಿಸುತ್ತವೆ. ಚೋಂಗೆ, ಮಾಲ್ದಿ, ಶರಬತ್ತು, ಮೊಸರನ್ನದಂತಹ ವಿಶೇಷ ಆಹಾರಗಳನ್ನು ತಯಾರಿಸಿ ಹಂಚಲಾಗುತ್ತದೆ. ಕರ್ಬಲಾ ವೀರರು ನೀರು ಮತ್ತು ಆಹಾರವಿಲ್ಲದೆ ಸಂಕಷ್ಟ ಅನುಭವಿಸಿದ ನೆನಪಿನಲ್ಲಿ ಹಸಿದವರಿಗೆ ಅನ್ನ ನೀಡುವುದು, ಬಾಯಾರಿದವರಿಗೆ ಶರಬತ್ತು ನೀಡುವುದು ಮಾನವೀಯ ಸಂದೇಶ ಸಾರುತ್ತದೆ.
ಮೊಹರಂ ಹಾಡುಗಳಲ್ಲಿಯೂ ಜನಪದ ಸಂವೇದನೆ ವ್ಯಕ್ತವಾಗುತ್ತದೆ. ಕರ್ಬಲಾ ದುರಂತದೊಂದಿಗೆ ಸ್ಥಳೀಯ ದುಃಖದ ಘಟನೆಗಳು, ಜನರ ನೋವು, ತ್ಯಾಗ ಮತ್ತು ಜೀವನದ ಅನುಭವಗಳು ಸೇರಿಕೊಂಡಿವೆ. ಹೀಗಾಗಿ ಮೊಹರಂ ಹಾಡುಗಳು ಕೇವಲ ಧಾರ್ಮಿಕ ಕಥನಗಳಾಗದೆ ಜನರ ಬದುಕಿನ ಭಾವನೆಗಳನ್ನು ಪ್ರತಿಬಿಂಬಿಸುವ ಜನಪದ ಸಾಹಿತ್ಯವಾಗಿ ಬೆಳೆದಿವೆ.
ಮೊಹರಂ ಹಾಡುಗಾರರು ಇಸ್ಲಾಂ ಚರಿತ್ರೆಯ ಜೊತೆಗೆ ಮಹಾಭಾರತ, ರಾಮಾಯಣ ಮತ್ತು ಶಿವಪುರಾಣಗಳ ಕಥೆಗಳಲ್ಲಿಯೂ ಪರಿಣತಿ ಹೊಂದಿದ್ದು, ವಿವಿಧ ಧರ್ಮಗಳ ಕಥನಗಳನ್ನು ಒಂದೆಡೆ ಸೇರಿಸುವ ಪರಂಪರೆ ಬೆಳೆಸಿದ್ದಾರೆ. ಪೈಗಂಬರರನ್ನು ಶರಣರಂತೆ, ಹುಸೇನ್-ಹಸನರನ್ನು ಭಾರತೀಯ ಪುರಾಣಗಳ ಪಾತ್ರಗಳೊಂದಿಗೆ ಹೋಲಿಸಿ ಹಾಡುವ ಸಂಪ್ರದಾಯವೂ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ.
ಕರ್ನಾಟಕದ ಸಂಸ್ಕೃತಿಯ ಪ್ರಮುಖ ಲಕ್ಷಣವಾದ ಬಹುತ್ವದ ಮನೋಭಾವ ಮೊಹರಂ ಆಚರಣೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಧರ್ಮಗಳ ನಡುವೆ ಸಂಘರ್ಷಕ್ಕಿಂತ ಸಂವಾದ ಮತ್ತು ಸಹಬಾಳ್ವೆ ಸಾಧ್ಯ ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತಿದೆ.
ವಿಜಯಪುರದ ಜೋರಪುರ ಪೇಟೆ ಹಾಗೂ ಬಬಲೇಶ್ವರ ನಾಕಾದಲ್ಲಿ ಹಿಂದೂ-ಮುಸ್ಲಿಂರು ಕೈಜೋಡಿಸಿ ಆಚರಿಸುವ ಮೊಹರಂ, ಜನರ ನಡುವೆ ಇರುವ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಗೆ ಜೀವಂತ ಸಾಕ್ಷಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande