ಮಳೆಗಾಗಿ ಮೊರೆ ; ಗ್ರಾಮದಲ್ಲಿ ಗೊಂಬೆಗಳ ಮದುವೆ, ವರುಣನ ಕೃಪೆಗೆ ಗ್ರಾಮಸ್ಥರ ಪ್ರಾರ್ಥನೆ
ಬಾಗಲಕೋಟೆ, 25 ಜೂನ್ (ಹಿ.ಸ.) : ಆಂಕರ್ : ಮಳೆ ಕೊರತೆಯಿಂದ ಆತಂಕಗೊಂಡಿರುವ ರೈತರು ಹಾಗೂ ಗ್ರಾಮಸ್ಥರು ಉತ್ತಮ ಮಳೆಯಾಗಲಿ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂದು ಪ್ರಾರ್ಥಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವರ್ಚಗಲ್ಲ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಗೊಂಬೆಗಳ ಮದುವೆ ಕಾರ್ಯಕ್ರಮವನ್ನು ನೆರ
Doll marriage


ಬಾಗಲಕೋಟೆ, 25 ಜೂನ್ (ಹಿ.ಸ.) :

ಆಂಕರ್ : ಮಳೆ ಕೊರತೆಯಿಂದ ಆತಂಕಗೊಂಡಿರುವ ರೈತರು ಹಾಗೂ ಗ್ರಾಮಸ್ಥರು ಉತ್ತಮ ಮಳೆಯಾಗಲಿ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂದು ಪ್ರಾರ್ಥಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವರ್ಚಗಲ್ಲ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಗೊಂಬೆಗಳ ಮದುವೆ ಕಾರ್ಯಕ್ರಮವನ್ನು ನೆರವೇರಿಸಿದರು.

ಗ್ರಾಮದ ಗುರುಹಿರಿಯರು, ಮಹಿಳೆಯರು ಹಾಗೂ ಗ್ರಾಮಸ್ಥರು ಒಗ್ಗೂಡಿ ಸಂಪ್ರದಾಯದಂತೆ ಬೊಂಬೆಗಳಿಗೆ ವಧು-ವರರ ರೂಪ ನೀಡಿ, ಮದುವೆಯ ಎಲ್ಲ ವಿಧಿ-ವಿಧಾನಗಳನ್ನು ನೆರವೇರಿಸಿದರು. ಮಂಗಳ ವಾದ್ಯಗಳೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಂಭ್ರಮದಿಂದ ಪಾಲ್ಗೊಂಡು ವರುಣ ದೇವನಿಗೆ ಪೂಜೆ ಸಲ್ಲಿಸಿ, ಶೀಘ್ರ ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಿದರು.

ಮಳೆ ಹಾಗೂ ಬೆಳೆ ಸಮೃದ್ಧಿಗಾಗಿ ಗ್ರಾಮೀಣ ಭಾಗಗಳಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಯನ್ನು ವರ್ಚಗಲ್ಲ ಗ್ರಾಮಸ್ಥರು ಭಕ್ತಿಭಾವದಿಂದ ಆಚರಿಸಿದರು. ಗೊಂಬೆಗಳ ಮದುವೆ ಮೂಲಕ ಪ್ರಕೃತಿ ದೇವತೆಯನ್ನು ಒಲಿಸಿಕೊಳ್ಳುವ ನಂಬಿಕೆಯೊಂದಿಗೆ ಗ್ರಾಮಸ್ಥರು ಒಗ್ಗಟ್ಟಿನಿಂದ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹನಮಂತ ತುಳಸಿಗೇರಿ, ಲಕ್ಷ್ಮಣ ಹಣಗಲಿ, ಶಂಕರಗೌಡ ಪಾಟೀಲ, ಲೋಕಣ್ಣಗೌಡ ಪಾಟೀಲ, ರಾಮಣ್ಣ ಹಣಗಲಿ, ಕರಿಯಪ್ಪ ಪೂಜಾರ, ರವಿ ತೋಟದ, ಪುಟ್ಟು ತುಳಸಿಗೇರಿ, ಭೀಮನಗೌಡ ಪಾಟೀಲ, ವೆಂಕನಗೌಡ ಪಾಟೀಲ, ಯಮನಪ್ಪ ಬುಡ್ರಿ ಸೇರಿದಂತೆ ಹಲವರು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.

ಗ್ರಾಮಸ್ಥರು, “ಈ ಬಾರಿ ಉತ್ತಮ ಮಳೆಯಾಗಿ ರೈತರ ಹೊಲಗಳಲ್ಲಿ ಹಸಿರು ಬೆಳೆಗಳು ಕಂಗೊಳಿಸಲಿ, ಎಲ್ಲರ ಬದುಕು ಸಮೃದ್ಧವಾಗಲಿ” ಎಂದು ಆಶಯ ವ್ಯಕ್ತಪಡಿಸಿದರು. ಸಾಂಪ್ರದಾಯಿಕ ಆಚರಣೆಯ ಮೂಲಕ ಮಳೆಗಾಗಿ ಪ್ರಾರ್ಥಿಸಿದ ವರ್ಚಗಲ್ಲ ಗ್ರಾಮದ ಈ ಕಾರ್ಯಕ್ರಮ ಗಮನ ಸೆಳೆಯಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande