
ಬಾಗಲಕೋಟೆ, 24 ಜೂನ್ (ಹಿ.ಸ.) :
ಆಂಕರ್ : ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ಸಮುದಾಯಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ನಿರ್ಲಕ್ಷ್ಯ ತೋರಿಸುತ್ತಿರುವ ಬೀಳಗಿ ಮತಕ್ಷೇತ್ರದ ಹಾಲಿ ಶಾಸಕ ಹಾಗೂ ಸ್ವಹಿತಾಸಕ್ತಿಗಾಗಿ ಹೋರಾಟದ ಮಾತುಗಳನ್ನಾಡುತ್ತಿರುವ ಮಾಜಿ ಶಾಸಕರ ವಿರುದ್ಧ ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಹಿಂದುಳಿದ ವರ್ಗಗಳು, ಬಡವರು ಹಾಗೂ ಶೋಷಿತ ಸಮುದಾಯಗಳು ಹಲವು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಜನಪ್ರತಿನಿಧಿಗಳು ಈ ಬಗ್ಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಅಹಿಂದ ಸಮುದಾಯಗಳ ಶಿಕ್ಷಣ, ಉದ್ಯೋಗ, ಮೂಲಸೌಕರ್ಯ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಲ್ಲಿ ಶಾಸಕರು ಹಾಗೂ ಮಾಜಿ ಶಾಸಕರು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಜನರ ಸಮಸ್ಯೆಗಳನ್ನು ಬದಿಗಿಟ್ಟು ವೈಯಕ್ತಿಕ ರಾಜಕೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೆಗಡೆ ದೂರಿದರು.
ವಿಧಾನ ಸೌಧದ ಎದುರು ಹೋರಾಟ ನಡೆಸುವ ಬಗ್ಗೆ ಮಾಜಿ ಶಾಸಕರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಿಜವಾದ ಜನಪರ ಸಮಸ್ಯೆಗಳಿಗಾಗಿ ಹೋರಾಟ ಮಾಡಬೇಕೇ ಹೊರತು ಸ್ವಂತ ರಾಜಕೀಯ ಲಾಭಕ್ಕಾಗಿ ಹೋರಾಟದ ನಾಟಕ ಮಾಡಬಾರದು ಎಂದು ಟೀಕಿಸಿದರು.
ಬೀಳಗಿ ಕ್ಷೇತ್ರದ ಹಿಂದುಳಿದ ಸಮುದಾಯಗಳ ಧ್ವನಿಯಾಗಿ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು. ಜನರ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಯಲ್ಲಪ್ಪ ಹೆಗಡೆ ಹೇಳಿದರು.
ಅಹಿಂದ ಸಮುದಾಯಗಳ ಹಕ್ಕು, ಅಭಿವೃದ್ಧಿ ಹಾಗೂ ನ್ಯಾಯಕ್ಕಾಗಿ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande