
ವಿಜಯಪುರ, 24 ಜೂನ್ (ಹಿ.ಸ.) :
ಆಂಕರ್ : ದೇಶದ ಖ್ಯಾತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ಕೊಲ್ಹಾಪುರದ ಉದ್ಯಮಿ ಸಂಜಯ್ ಘೋಡಾವತ್ ಅವರು ಇಂದು ಕೈಗಾರಿಕ ಸಚಿವ ಎಂ ಬಿ ಪಾಟೀಲ್ ಅವರ ವಿಜಯಪುರದ ನಿವಾಸಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕದ ಕೈಗಾರಿಕಾ ವಲಯದಲ್ಲಿನ ಹೂಡಿಕೆ ಅವಕಾಶಗಳು ಹಾಗೂ ರಾಜ್ಯದ ಹೂಡಿಕೆ ಸ್ನೇಹಿ ವಾತಾವರಣದ ಕುರಿತು ಚರ್ಚೆ ನಡೆಯಿತು.
ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲಕರ ವಾತಾವರಣವಿದ್ದು, ಉದ್ಯಮಿಗಳಿಗೆ ತ್ವರಿತ ಅನುಮತಿ ವ್ಯವಸ್ಥೆ, ಉತ್ತಮ ಮೂಲಸೌಕರ್ಯ ಸೌಲಭ್ಯಗಳು, ಸುಲಭ ಆಡಳಿತ ಕ್ರಮಗಳು ಹಾಗೂ ಕೌಶಲ್ಯಯುತ ಯುವ ಮಾನವ ಸಂಪನ್ಮೂಲ ಲಭ್ಯವಿದೆ ಎಂದು ತಿಳಿಸಿ, ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹೂಡಿಕೆ ಮಾಡುವಂತೆ ಸಂಜಯ್ ಘೋಡಾವತ್ ಅವರಿಗೆ ಸಚಿವ ಪಾಟೀಲ್ ಆಹ್ವಾನ ನೀಡಿದರು.
ಕೃಷಿ, ಆಹಾರ ಸಂಸ್ಕರಣೆ, ಇಂಧನ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮಗಳನ್ನು ಸ್ಥಾಪಿಸಿರುವ ಸಂಜಯ್ ಘೋಡಾವತ್ ಅವರು ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಪ್ರಮುಖ ಕೈಗಾರಿಕಾ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಉದ್ಯಮದ ಬೆಳವಣಿಗೆಯನ್ನು ಸಾಮಾಜಿಕ ಅಭಿವೃದ್ಧಿಯೊಂದಿಗೆ ಜೋಡಿಸಿ ಮುನ್ನಡೆಸುತ್ತಿರುವ ಅವರ ದೂರದೃಷ್ಟಿಯ ನಾಯಕತ್ವವು ಯುವ ಉದ್ಯಮಿಗಳಿಗೆ ಮಾದರಿಯಾಗಿದೆ.
ಕರ್ನಾಟಕ ಸರ್ಕಾರವು ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹೊಸ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ.
ವಿಜಯಪುರ ಜಿಲ್ಲೆಯಲ್ಲಿಯೂ ಕೈಗಾರಿಕಾ ವಿಸ್ತರಣೆಗೆ ಉತ್ತಮ ಅವಕಾಶಗಳಿದ್ದು, ಹೂಡಿಕೆದಾರರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಲಾಯಿತು.
ಸಂಜಯ್ ಘೋಡಾವತ್ ಅವರಂತಹ ಅನುಭವಿ ಉದ್ಯಮಿಗಳ ಹೂಡಿಕೆ ರಾಜ್ಯದ ಕೈಗಾರಿಕಾ ಪ್ರಗತಿಗೆ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ. ಈ ಭೇಟಿ ಕೈಗಾರಿಕಾ ಸಹಭಾಗಿತ್ವ ಮತ್ತು ಭವಿಷ್ಯದ ಹೂಡಿಕೆ ಅವಕಾಶಗಳ ದೃಷ್ಟಿಯಿಂದ ಮಹತ್ವ ಪಡೆದಿದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande