
ಬಾಗಲಕೋಟೆ, 24 ಜೂನ್ (ಹಿ.ಸ.) :
ಆಂಕರ್ : ಶಾಸಕ ಆರ್.ಬಿ. ತಿಮ್ಮಾಪುರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ ಅವರು ಹಕ್ಕೊತ್ತಾಯ ಮಂಡಿಸಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಬಿ. ತಿಮ್ಮಾಪುರ ಅವರು ಹಿಂದಿನ ಅವಧಿಯಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಕೈಗೊಂಡ ಹಲವು ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದರು.
ಕ್ಷೇತ್ರದ ಅಭಿವೃದ್ಧಿ, ರೈತರ ಹಿತಾಸಕ್ತಿ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ತಿಮ್ಮಾಪುರ ಅವರು ಸಲ್ಲಿಸಿರುವ ಸೇವೆ ಗಮನಾರ್ಹವಾಗಿದೆ ಎಂದು ಹೇಳಿದರು.
ಮುಚ್ಚಿಹೋಗಿದ್ದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಲೀಸ್ ಮೂಲಕ ಪುನರಾರಂಭಿಸುವಲ್ಲಿ ತಿಮ್ಮಾಪುರ ಅವರ ಪಾತ್ರ ಪ್ರಮುಖವಾಗಿದೆ. ಇದರಿಂದ ಸಾವಿರಾರು ರೈತರು ಹಾಗೂ ಕಾರ್ಮಿಕರಿಗೆ ಉದ್ಯೋಗ ಮತ್ತು ಆರ್ಥಿಕ ನೆರವು ದೊರೆಯುವಂತಾಯಿತು ಎಂದು ಅವರು ತಿಳಿಸಿದರು.
ಅಲ್ಲದೇ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರಿಗೆ ಪರಿಹಾರ ನಿಗದಿಪಡಿಸುವ ಪ್ರಕ್ರಿಯೆಯಲ್ಲಿಯೂ ತಿಮ್ಮಾಪುರ ಅವರು ಮಹತ್ವದ ಶ್ರಮ ವಹಿಸಿದ್ದರು. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಜನರ ಧ್ವನಿಯಾಗಿ ಕೆಲಸ ಮಾಡುವ ನಾಯಕನಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದು ಸೂಕ್ತ ಎಂದು ಸದುಗೌಡ ಪಾಟೀಲ ಅಭಿಪ್ರಾಯಪಟ್ಟರು.
ರಾಜ್ಯದ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖಂಡರು ತಿಮ್ಮಾಪುರ ಅವರ ಸೇವೆ ಮತ್ತು ಅನುಭವವನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು. ಈ ಮೂಲಕ ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande